ADVERTISEMENT

Fact Check | ಎ.ಐ ಶೃಂಗದಲ್ಲಿ ರೊಬೋ ಮಾನವನನ್ನು ನಿಂದಿಸುವ ದೃಶ್ಯ: ಇದು ಸುಳ್ಳು

ಫ್ಯಾಕ್ಟ್ ಚೆಕ್
Published 22 ಫೆಬ್ರುವರಿ 2026, 23:27 IST
Last Updated 22 ಫೆಬ್ರುವರಿ 2026, 23:27 IST
.
.   

ವ್ಯಕ್ತಿಯೊಬ್ಬರು ಮಾನವ ರೊಬೋಟ್‌ ಜೊತೆ ಮಾತನಾಡುತ್ತಿರುವ ವಿಡಿಯೊವನ್ನು ‘ಎಕ್ಸ್‌’ನಲ್ಲಿ @ಅರುಣ್‌ಕೊಸ್ಲಿ ಎಂಬವರ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ವ್ಯಕ್ತಿಯು ರೊಬೋ ಮಾನವನನ್ನು ನಿಂದಿಸುವ ದೃಶ್ಯ ವಿಡಿಯೊದಲ್ಲಿದೆ. ಇದು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಎಐ ಶೃಂಗಸಭೆಯಲ್ಲಿ ನಡೆದ ಘಟನೆಯ ವಿಡಿಯೊ ಎಂದು ಪ್ರತಿ‍ಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು. 

ವಿಡಿಯೊದ ಕೀಫ್ರೇಮ್‌ ಒಂದನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ರಿವರ್ಸ್‌ ಸರ್ಚ್‌ ವಿಧಾನದಲ್ಲಿ ಹುಡುಕಾಡಿದಾಗ ಬೇರೆಯವರೂ ಇದೇ ವಿಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂತು. ಮತ್ತಷ್ಟು ಹುಡುಕಿದಾಗ ಫೆ.18ರಂದು ಎಕ್ಸ್‌ ಬಳಕೆದಾರ @....ಇಶ್ಕ್‌.. ಎಂಬವರು, ‘ಈ ವಿಡಿಯೊದಲ್ಲಿರುವವರು ಪಾಕಿಸ್ತಾನದವರು, ವಿಡಿಯೊವು ಬಹುಶಃ ದುಬೈನಲ್ಲಿ ಚಿತ್ರೀಕರಿಸಿದ್ದು’ ಎಂದು ಮಾಡಿದ್ದ ಪೋಸ್ಟ್‌ ಸಿಕ್ಕಿತು. ವಿಡಿಯೊದಲ್ಲಿರುವ ವ್ಯಕ್ತಿಯ ಚಿತ್ರವನ್ನು ರಿವರ್ಸ್‌ ಸರ್ಚ್‌ ವಿಧಾನದಲ್ಲಿ ಗೂಗಲ್‌ ಲೆನ್ಸ್‌ ಮೂಲಕ ಹುಡುಕಿದಾಗ, ‘ಮಿಯಾನ್‌ ಕಶೀಫ್‌ ಜಮೀರ್‌ ಆಫೀಶಿಯಲ್‌’ ಎಂಬ ಇನ್‌ಸ್ಟಾಗ್ರಾಂ ಖಾತೆ ಸಿಕ್ಕಿತು. ಪಾಕಿಸ್ತಾನದ ಲಾಹೋರ್‌ ಮೂಲದವರು ಎಂದು ಅವರು ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ. ನಂತರ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ ಮಾನವ ರೊಬೋಟ್‌ ಹೆಸರು ಅಮೆಕಾ ಎಂದೂ, ಅದು ದುಬೈನ ಮ್ಯೂಸಿಯಂ ಆಫ್‌ ದ ಫ್ಯೂಚರ್‌ನಲ್ಲಿ ಇದೆ ಎಂಬುದೂ ತಿಳಿಯಿತು. ದುಬೈನಲ್ಲಿ ನಡೆದ ಘಟನೆಯ ವಿಡಿಯೊವನ್ನು ದೆಹಲಿಯಲ್ಲಿ ಎಐ ಶೃಂಗಸಭೆಯಲ್ಲಿ ನಡೆದಿದ್ದು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT