
ಕಾಶ್ಮೀರದ ಜಮ್ಮು ವಲಯದಲ್ಲಿ ಏಕಾಏಕಿ ಹಿಮಕುಸಿತ ಸಂಭವಿಸಿದೆ ಎಂದು ಪ್ರತಿಪಾದಿಸುತ್ತಾ ಡಿಆರ್‌ಎಕ್ಸ್ ಮೊಹಮ್ಮದ್ ರಿಜ್ವಾನ್ ಎಂಬ ಫೇಸ್‌ಬುಕ್ ಬಳಕೆದಾರ ಇದೇ 7ರಂದು ಪೋಸ್ಟ್ ಮಾಡಿದ್ದರು. ‘6ರಂದು ಈ ಭೀಕರ ಹಿಮಕುಸಿತ ಸಂಭವಿಸಿದೆ. ಬೆಟ್ಟದಿಂದ ದಿಢೀರ್ ಆಗಿ ಕುಸಿದ ಭಾರಿ ಪ್ರಮಾಣದ ಹಿಮ ಮನೆಗಳನ್ನು ಮುಚ್ಚಿ ಹಾಕಿತು. ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಚಿಕ್ಕವನು ಎಂಬುದನ್ನು ಈ ಹಿಮ ಬೆಟ್ಟಗಳು ತೋರಿಸಿವೆ’ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.
ಇನ್‌ವಿಡ್ ಟೂಲ್ ಮೂಲಕ ವಿಡಿಯೊದ ಕೀ ಫ್ರೇಮ್‌ಗಳನ್ನು ಪ್ರತ್ಯೇಕಿಸಿ, ಒಂದು ಕೀ ಫ್ರೇಮ್ ಅನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಹಂಚಿಕೊಂಡಿರುವುದು ಕಂಡು ಬಂತು. 6ರಂದು ಹಿಮಕುಸಿತ ಸಂಭವಿಸಿದೆಯೇ ಎಂಬ ಬಗ್ಗೆ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ವಿಶ್ವಾಸಾರ್ಹ ಸುದ್ದಿಗಳು ಸಿಗಲಿಲ್ಲ. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ ಕೆಲವು ಅನುಮಾನಗಳು ಬಂದವು. ಉದಾಹರಣೆ, ಗುಡ್ಡದಿಂದ ಹಿಮ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದ್ದರೂ ರಸ್ತೆಯಲ್ಲಿ ಇದ್ದ ಜನರು ಆತಂಕಗೊಂಡಿರಲಿಲ್ಲ. ಅವರು ಭಯ ಬಿದ್ದು ಓಡುತ್ತಿರಲಿಲ್ಲ. ಇದರ ಆಧಾರದಲ್ಲಿ ವಿಡಿಯೊದ ಅಸಲಿತನವನ್ನು ಪತ್ತೆ ಮಾಡುವುದಕ್ಕಾಗಿ ಹೈವ್ ಮಾಡರೇಷನ್ ಎಂಬ ಎಐ ಪತ್ತೆ ಟೂಲ್ ಬಳಸಿ ವಿಡಿಯೊವನ್ನು ಪರಿಶೀಲಿಸಿದಾಗ, ಅದು ನೈಜ ವಿಡಿಯೊ ಅಲ್ಲ ಎಂಬುದು ತಿಳಿದು ಬಂತು. ಸೈಟ್ ಎಂಜಿನ್ ಎಂಬ ಮತ್ತೊಂದು ಎಐ ಪತ್ತೆ ಟೂಲ್ ಮೂಲಕ ಪರಿಶೀಲಿಸಿದಾಗ, ಅದು ಎಐ ಮೂಲಕ ಸೃಷ್ಟಿಸಿದ ವಿಡಿಯೊ ಎಂಬುದು ದೃಢಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.