ADVERTISEMENT

ಕೋಲ್ಕತ್ತ ಎನ್‌ಆರ್‌ಎಸ್ ಮೆಡಿಕಲ್ ಕಾಲೇಜಿನ ವೈದ್ಯ ಸಾವು: ಇದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 16:55 IST
Last Updated 17 ಜೂನ್ 2019, 16:55 IST
   

ನವದೆಹಲಿ:'ಕೋಲ್ಕತ್ತದ ನೀಲ್ ರತನ್ ಸರ್ಕಾರ್ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 85ರ ಹರೆಯದ ಮೊಹಮ್ಮದ್ ಶಹೀದ್ ಎಂಬವರನ್ನು ದಾಖಲು ಮಾಡಲಾಗಿತ್ತು .ವಾಂತಿ ಮತ್ತು ಅತೀವ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆ ರೋಗಿಯ ಆರೋಗ್ಯ ಹದಗೆಟ್ಟಿತ್ತು.ಚಿಕಿತ್ಸೆ ವೇಳೆ ಅವರು ಸಾವಿಗೀಡಾದರು.ಆತನ ಸಂಬಂಧಿಕರು ಮತ್ತು ಧರ್ಮದವರು ಆಸ್ಪತ್ರೆಗೆನುಗ್ಗಿ ಅಲ್ಲಿನ ಕಿರಿಯ ವೈದ್ಯರಾದ ಪರಿಬಹ ಮುಖರ್ಜಿ ಮತ್ತು ಯಶ್ ಟೆಕ್ವನಿ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಬಹ ಕೋಮಾ ಸ್ಥಿತಿಗೆ ತಲುಪಿದ್ದು, ಯಶ್‌ನ ಸ್ಥಿತಿ ಗಂಭೀರವಾಗಿದೆ. ಇದೀಗ ಸಿಕ್ಕಿದ ಸುದ್ದಿ ಪ್ರಕಾರ ಪರಿಬಹ ಮುಖರ್ಜಿ ಸಾವಿಗೀಡಾಗಿದ್ದಾರೆ. ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಚಿತ್ರಹಿಂಸೆ, ಅತ್ಯಾಚಾರ ಮತ್ತು ಹಿಂದುಗಳ ಹತ್ಯೆ ಮಾಮೂಲಿಯಾಗಿದೆ.ಯಾರೂ ಏನೂ ಮಾಡುತ್ತಿಲ್ಲ. 80-90ರ ಹರೆಯದ ಮುಲ್ಲಾ ಆಸ್ಪತ್ರೆಯಲ್ಲಿ ಸಹಜ ಸಾವೀಗೀಡಾಗಿದ್ದಾನೆ.ಅದನ್ನು ಪ್ರತಿಭಟಿಸಿ 200 ಮುಲ್ಲಾಗಳು ಯುವ ವೈದ್ಯರೊಬ್ಬರನ್ನು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಏನೂ ಹೇಳಬೇಡಿ. ಅವರು ಹೆದರಿಕೊಂಡಿರುವ ಮುಸ್ಲಿಮರು'ಎಂಬ ಬರಹವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆದರೆ ಈ ಪೋಸ್ಟ್‌ನಲ್ಲಿ ಹೇಳಿದಂತೆ ಕಿರಿಯ ವೈದ್ಯ ಪರಿಬಹ ಸಾವಿಗೀಡಾಗಿಲ್ಲ.ಇದೊಂದು ಸುಳ್ಳು ಸುದ್ದಿ. ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಬೂಮ್ ಲೈವ್, ಪರಿಬಹ ಗುಣಮುಖರಾಗುತ್ತಿದ್ದಾರೆ ಎಂದು ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್
ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸೌರವ್ ದತ್ತಾ ಜತೆ ಬೂಮ್ ಲೈವ್ ಮಾತನಾಡಿದ್ದು, ಪರಿಬಹ ಸಾವಿನ ಸುದ್ದಿ ಸುಳ್ಳು ಎಂದಿದ್ದಾರೆ.ಫೇಸ್‌ಬುಕ್ ಪೋಸ್ಟ್‌ನಲ್ಲಿರುವುದು ಸುಳ್ಳು.ಪರಿಬಹ ಗುಣಮುಖರಾಗುತ್ತಿದ್ದು, ಅವರ ಸಾವಿನ ಸುದ್ದಿ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.

ADVERTISEMENT

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಿಬಹ ಮಾತನಾಡುತ್ತಿರುವ ವಿಡಿಯೊವೊಂದು ಬೂಮ್‌ಗೆ ಸಿಕ್ಕಿದೆ.ಇದರಲ್ಲಿ ಪರಿಬಹ ತಾನು ಗುಣಮುಖನಾಗುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.

ಬೂಮ್ ತಂಡ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ಶಂತನು ಸೇನ್ ಅವರನ್ನು ಸಂಪರ್ಕಿಸಿದ್ದು, ಅವರು ಸೋಷ್ಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ವದಂತಿಯನ್ನು ತಳ್ಳಿ ಹಾಕಿದ್ದಾರೆ.ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರೂ ಆಗಿರುವ ಶಂತನು, ತಾನು ಭಾನುವಾರ ಆಸ್ಪತ್ರೆಯಲ್ಲಿ ಪರಿಬಹನನ್ನು ಭೇಟಿ ಮಾಡಿದ್ದೆ ಎಂದಿದ್ದಾರೆ. ನಾನು ಪರಿಬಹನನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿದ್ದೆ.ಅವರಿಗೆ ಚಿಕಿತ್ಸೆ ನೀಡುತ್ತಿರುವ ಸರ್ಜನ್ ಜತೆ ಮಾತನಾಡಿದ್ದೇನೆ, ದೇವರ ದಯೆಯಿಂದ ಪರಿಬಹ ಗುಣಮುಖರಾಗುತ್ತಿದ್ದಾರೆ ಎಂದಿದ್ದಾರೆ.

ಪರಿಬಹ ಅವರ ಸಾವಿನ ಬಗ್ಗೆ ವದಂತಿಗಳನ್ನು ನಂಬಬೇಡಿ. ಅಲ್ಲಿರುವ ಮತಾಂಧತೆಯ ಮಾತುಗಳಿಗೆ ಕಿವಿಗೊಡಬೇಡಿ ಎಂದು ಶಂತನು ನೆಟಿಜನ್‌ಗಳಲ್ಲಿ ಮನವಿಮಾಡಿದ್ದಾರೆ.

ಸೋಮವಾರ ಮಮತಾ ಬ್ಯಾನರ್ಜಿ ಜತೆ ಮಾತುಕತೆ ನಡೆಸಿದ ನಂತರ ವೈದ್ಯರು ಮುಷ್ಕರ ಅಂತ್ಯಗೊಳಿಸಿದ್ದಾರೆ. ಈ ವೇಳೆ ಕಿರಿಯ ವೈದ್ಯರ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಪ್ರತಿಭಾ, ಅವರು (ಪರಿಬಹ) ಬೇಗನೆ ಗುಣಮುಖರಾಗಲಿ ಎಂದು ನಾನು ಬಯಸುತ್ತೇನೆ.ನೀವು ಮುಷ್ಕರದಲ್ಲಿ ತೊಡಗಿದ್ದ ಕಾರಣ ನನಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದು ನನ್ನ ಮನಸ್ಸನ್ನು ತುಂಬಾ ಕಾಡುತ್ತಿದೆ ಎಂದಿದ್ದಾರೆ.

ಇಂಡಿಯಾ ಟುಡೇ ಸೋಮವಾರ ಪರಿಬಹ ಅವರ ಸಂಬಂಧಿ ಸಂಜಿತ್ ಚಟರ್ಜಿ ಅವರ ಜತೆ ಮಾತನಾಡಿದ್ದು, ಅವರು ಗುಣಮುಖರಾಗುತ್ತಿದ್ದಾರೆ ಎಂದು ಚಟರ್ಜಿ ಹೇಳಿದ್ದಾರೆ.

ಬಂಗಾಳದ ವೈದ್ಯರು ಮುಷ್ಕರ ನಡೆಸಿದ್ದೇಕೆ?
ಜೂನ್ 10ರಂದು ವೈದ್ಯರ ನಿರ್ಲಕ್ಷ್ಯದಿಂದ 74ರ ಹರೆಯದ ಮೊಹಮ್ಮದ್ ಸಯ್ಯದ್ ಮರಣ ಹೊಂದಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬದವರು ಎನ್‌ಆರ್‌ಎಲ್ ಮೆಡಿಕಲ್ ಕಾಲೇಜಿನ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು.ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ಸಯ್ಯದ್ ಕುಟುಂಬದವರ ನಡುವೆ ನಡೆದ ಜಗಳದಲ್ಲಿ ಹಲವಾರು ವೈದ್ಯರು ಗಾಯಗೊಂಡಿದ್ದರು.ಈ ಜಟಾಪಟಿಯಲ್ಲಿ ಪರಿಬಹ ಮುಖರ್ಜಿ ಎಂಬ ಕಿರಿಯ ವೈದ್ಯರಿಗೆ ಗಂಭೀರ ಗಾಯಗಳಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಕಿರಿಯ ವೈದ್ಯರು ಮುಷ್ಕರ ಹೂಡಿದ್ದು, ಸಾಮೂಹಿಕ ರಾಜೀನಾಮೆ ನೀಡಿದ್ದರು. ತಮಗೆ ಕೆಲಸ ಮಾಡಲು ಸುರಕ್ಷಿತವಾದ ವಾತಾವರಣ ಬೇಕು ಎಂದು ಒತ್ತಾಯಿಸಿ ವೈದ್ಯರು ಮುಷ್ಕರ ನಡೆಸಿದ್ದು, ಈ ಮುಷ್ಕರದಿಂದ ರಾಜ್ಯದಲ್ಲಿ ವೈದ್ಯಕೀಯ ಸೇವೆ ಮೊಟಕುಗೊಂಡಿತ್ತು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.