ADVERTISEMENT

Ind-Pak Tensions: ಪಾಕಿಸ್ತಾನ ಮಾಧ್ಯಮಗಳು ಹರಡಿದ ಸುಳ್ಳುಗಳಿವು; ಸತ್ಯ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2025, 14:09 IST
Last Updated 12 ಮೇ 2025, 14:09 IST
   

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ಶಸ್ತ್ರಸಜ್ಜಿತ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್‌ ಸಿಂಧೂರ’ ಆರಂಭಿಸಿತು. ಆದರೆ ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಮೇಲುಗೈ ಸಾಧಿಸಿದೆ ಎಂಬಂತೆ ಸುಳ್ಳು ಸುದ್ದಿಗಳನ್ನು ಅಲ್ಲಿನ ಹ್ಯಾಂಡ್ಲರ್‌ಗಳು ಹಂಚಿಕೊಂಡಿದ್ದರು.

ಪಂಜಾಬ್‌ನ ಅಮೃತಸರದ ಸೇನಾ ನೆಲೆಯನ್ನು ಪಾಕಿಸ್ತಾನ ಸೇನೆ ನಾಶಗೊಳಿಸಿದೆ. ಭಾರತದ ಮಾನವ ರಹಿತ ವಿಮಾನವನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ. ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಬಿಳಿ ವಸ್ತ್ರ ಪ್ರದರ್ಶಿಸಿದೆ ಎಂಬಿತ್ಯಾದಿ ಪೋಸ್ಟ್‌ಗಳನ್ನು ಪಾಕಿಸ್ತಾನಿಗಳು ಹಂಚಿಕೊಂಡಿದ್ದಾರೆ. 

ಆದರೆ ವಾಸ್ತವದಲ್ಲಿ ಇವೆಲ್ಲವೂ ಸುಳ್ಳು ಎಂದು ಪಿಐಬಿಯ ಸತ್ಯಶೋಧನ ವಿಭಾಗವು ಸಾಕ್ಷಿ ಸಹಿತ ಪಾಕಿಸ್ತಾನದ ಮಾಧ್ಯಮಗಳು ಹೇಳಿದ ಸುಳ್ಳುಗಳು ಮತ್ತು ವಾಸ್ತವವನ್ನು ತಿಳಿಸುವ ಪ್ರಯತ್ನ ಮಾಡಿದೆ.

ADVERTISEMENT

ವಿಡಿಯೊ ಒಂದನ್ನು ಹಂಚಿಕೊಂಡಿರುವ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಹ್ಯಾಂಡ್ಲರ್‌ಗಳು, ‘ಅಮೃತಸರದ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಸೇನೆಯು ದಾಳಿ ನಡೆಸಿ ಧ್ವಂಸಗೊಳಿಸಿದೆ’ ಎಂದು ಸುಳ್ಳು ಸುದ್ದಿ ಹರಡಿದ್ದರು. 

ಈ ಸುಳ್ಳು ಸುದ್ದಿಗೆ ಅವರು ಹಂಚಿಕೊಂಡ ವಿಡಿಯೊ 2024ರ ಕಾಳ್ಗಿಚ್ಚಿನದ್ದಾಗಿತ್ತು. 

ಭಾರತ ಹಾರಿಸಿದ ಮಾನವ ರಹಿತ ಡ್ರೋನ್‌ ಅನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ. ಅದು ಪಾಕಿಸ್ತಾನದ ಗುಜ್ರನ್‌ವಾಲಾದಲ್ಲಿ ಬಿದ್ದಿದೆ ಎಂದು ಪಾಕಿಸ್ತಾನದ ಕೆಲ ಹ್ಯಾಂಡ್ಲರ್‌ಗಳು ಪೋಸ್ಟ್ ಹಂಚಿಕೊಂಡಿದ್ದವು.

ಅಸಲಿಗೆ ಅದರೊಂದಿಗೆ ಹಂಚಿಕೊಳ್ಳಲಾದ ಚಿತ್ರ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ್ದಾಗಿತ್ತು.

ಭಾರತ ಮತ್ತು ಪಾಕಿಸ್ತಾನ ನಡುವಿನ ನಿಯಂತ್ರಣ ರೇಖೆಯಲ್ಲಿ 2019ರ ಸೆಪ್ಟೆಂಬರ್‌ನಲ್ಲಿ ಬಿಳಿ ಬಾವುಟ ತೋರಿಸುವ ಪಾಕಿಸ್ತಾನ ಸೇನೆ, ತನ್ನ ದೇಶ ಪರ ಹೋರಾಡಿ ಮಡಿದ ಯೋಧರ ಮೃತದೇಹ ತೆಗೆದುಕೊಂಡು ಹೋಗಿದ್ದರು. ಆ ವಿಡಿಯೊವನ್ನು ಹಂಚಿಕೊಂಡ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು, ಭಾರತೀಯ ಸೇನೆ ಶರಣಾಗತಿ ಬಯಸಿದೆ ಎಂದು ಸುಳ್ಳು ಹರಡುವ ಯತ್ನ ನಡೆಸಿದ್ದಾರೆ.

ಫೈಟರ್‌ ಜೆಟ್‌ ಹೊಡೆದುರುಳಿಸಲಾಗಿದೆ ಎಂಬ ಸುಳ್ಳು ಪೋಸ್ಟ್ ಹಂಚಿಕೊಳ್ಳಲಾಗಿತ್ತು. ವಾಸ್ತವದಲ್ಲಿ ಮಿರಾಜ್‌ 2000 ಯುದ್ಧ ವಿಮಾನವು 2025ರ ಫೆಬ್ರುವರಿಯಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುವ ಸಂದರ್ಭದಲ್ಲಿ ಗ್ವಾಲಿಯರ್‌ನ ಶಿವಪುರಿ ಎಂಬಲ್ಲಿ ಪತನಗೊಂಡ ಚಿತ್ರವಾಗಿತ್ತು.

ಭಾರತದಾದ್ಯಂತ ಎಟಿಎಂಗಳು ಮುಂದಿನ 2ರಿಂದ 3 ದಿನಗಳ ಕಾಲ ಮುಚ್ಚಿರಲಿದೆ ಎಂಬ ಸಂದೇಶ ವಾಟ್ಸ್‌ಆ್ಯಪ್‌ ಮೂಲಕ ಹರಿಯಬಿಡಲಾಗಿತ್ತು. 

ಇದು ಸುಳ್ಳು ಸುದ್ದಿ ಎಂದು ಪಿಐಬಿ ಹೇಳಿದ್ದು, ಎಲ್ಲಾ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಯಾವುದೇ ನಿರ್ದೇಶನ ಸಂಬಂಧಪಟ್ಟ ಇಲಾಖೆಯಿಂದ ಬಂದಿಲ್ಲ ಎಂದು ಸತ್ಯದ ಮೇಲೆ ಬೆಳಕು ಚೆಲ್ಲಿತ್ತು.

ಜಮ್ಮು ವಾಯು ನೆಲೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹಳೆಯ ಚಿತ್ರವೊಂದನ್ನು ಹಂಚಿಕೊಂಡು ಸುಳ್ಳು ಸುದ್ದಿಯನ್ನು ಪಾಕಿಸ್ತಾನ ಮೂಲದ ಖಾತೆಯೊಂದು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಪಿಐಬಿ ತಿಳಿಸಿದೆ.

ಗುಜರಾತ್‌ನ ಹಝಿರಾ ಬಂದರು ಮೇಲೆ ದಾಳಿ ನಡೆದಂತೆ ವಿಡಿಯೊ ಒಂದನ್ನು ಹರಿಯಬಿಡಲಾಗಿತ್ತು. ಆದರೆ ಇದು ಸುಳ್ಳು ಸುದ್ದಿಯಾಗಿದ್ದು, 2021ರ ಜುಲೈನಲ್ಲಿ ತೈಲ ಟ್ಯಾಂಕರ್‌ ಸ್ಫೋಟಗೊಂಡ ವಿಡಿಯೊವನ್ನು ಇದರೊಂದಿಗೆ ಹಂಚಿಕೊಳ್ಳಲಾಗಿತ್ತು. ಹೀಗಾಗಿ ಅವರು ಹೇಳಿದ್ದಕ್ಕೂ ಈ ವಿಡಿಯೊಗೂ ಯಾವುದೇ ಸಂಬಂಧವಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಪಂಜಾಬ್‌ ಜಲಂಧರ್‌ ಮೇಲೆ ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯಿಂದ ಸಾಕಷ್ಟು ಹಾನಿಯಾಗಿದೆ ಎಂಬ ಪೋಸ್ಟ್ ವ್ಯಾಪಕವಾಗಿ ಹರಿದಾಡಿತು. 

ಈ ಸುಳ್ಳು ಸುದ್ದಿಯ ಬೆನ್ನುಹತ್ತಿದ ಪಿಐಬಿ, ಇದು ಕೃಷಿ ಜಮೀನಿನ ಚಿತ್ರವಾಗಿತ್ತೇ ಹೊರತು, ಡ್ರೋನ್‌ ದಾಳಿಯದಲ್ಲ ಎಂದಿತ್ತು. ಇದೇ ಪೋಸ್ಟ್‌ನೊಂದಿಗೆ ವಿಡಿಯೊ ಕೂಡಾ ಹಂಚಿಕೊಳ್ಳಲಾಗಿತ್ತು. ಅದು ಆಗಸ್ಟ್ 2021ರಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದ್ದಾಗಿತ್ತು.

ಪಾಕಿಸ್ತಾನದ ಮತ್ತೊಂದು ಹ್ಯಾಂಡ್ಲರ್‌ ಪೋಸ್ಟ್‌ ಹಂಚಿಕೊಂಡು, ‘ಭಾರತದ 20 ರಾಜ್‌ ಬೆಟಾಲಿಯನ್‌‘ನ ಸೇನಾ ನೆಲೆ ಮೆಲೆ ಪಾಕಿಸ್ತಾನ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿದೆ ಎಂದು ಹಂಚಿಕೊಳ್ಳಲಾಗಿತ್ತು.

ವಾಸ್ತವದಲ್ಲಿ ಇದು ಸುಳ್ಳು ಸುದ್ದಿಯಾಗಿದ್ದು, ಇಂಥ ಹೆಸರಿನ ಬೆಟಾಲಿಯನ್‌ ಭಾರತದಲ್ಲಿ ಇಲ್ಲ ಎಂದು ಪಿಐಬಿ ಹೇಳಿದೆ.

ಭಾರತದ ಮೇಲೆ ಪಾಕಿಸ್ತಾನ ಸೇನೆ ಕ್ಷಿಪಣಿ ದಾಳಿ ನಡೆಸಿದೆ ಎಂಬ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ವಾಸ್ತವದಲ್ಲಿ ಅದು 2020ರಲ್ಲಿ ಲೆಬೆನಾನ್‌ನ ಬೈರೂತ್‌ನಲ್ಲಿ ನಡೆದ ಸ್ಫೋಟದ ವಿಡಿಯೊ ತುಣುಕಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ್ದಲ್ಲ ಎಂದು ಪಿಐಬಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.