ಸಾಂದರ್ಭಿಕ ಚಿತ್ರ
ಗ್ವಾಲಿಯರ್: ಕುಟುಂಬದವರು ನೋಡಿದ ವರನನ್ನು ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಆಕೆಯ ತಂದೆ ಹಾಗೂ ಸೋದರ ಸಂಬಂಧಿ ಸೇರಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಗೋಲಾ ಕಾ ಮಂದಿರ್ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ಸಿಂಗ್ ಸಿಕರ್‌ವರ್ ತಿಳಿಸಿದ್ದಾರೆ. ತನು ಗುರ್ಜರ್ (20) ಕೊಲೆಯಾದ ಮಹಿಳೆ.
ಕುಟುಂಬಸ್ಥರು ತೋರಿಸಿದ ವರನೊಂದಿಗೆ ತನು ಮದುವೆ ಜನವರಿ 18ರಂದು ನಿಗದಿಯಾಗಿತ್ತು. ಆದರೆ ಈ ಮದುವೆ ತನು ಅವರಿಗೆ ಇಷ್ಟವಿರಲಿಲ್ಲ. ಈ ಸಂಬಂಧ ತಂದೆಯೊಂದಿಗೆ ಜಗಳವಾಡಿದ್ದು, ಗಲಾಟೆ ತಾರಕಕ್ಕೇರಿ ತಂದೆ ನಾಡ ಬಂದೂಕಿನಿಂದ ಗುಂಡು ಹೊಡೆದಿದ್ದಾರೆ. ಸೋದರ ಸಂಬಂಧಿ ರಾಹುಲ್, ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದು, ತಂದೆ ಮಹೇಶ್ ಸಿಂಗ್ ಗುರ್ಜರ್ (45) ಸ್ಥಳದಲ್ಲೇ ಪಿಸ್ತೂಲ್ ಹಿಡಿದೇ ನಿಂತಿದ್ದ. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.
ತನು ದೇಹಕ್ಕೆ ನಾಲ್ಕು ಗುಂಡುಗಳು ಹೊಕ್ಕಿದ್ದು, ರಾಹುಲ್ ಪತ್ತೆಗೆ ಬಲೆ ಬೀಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.