ಹೈದರಾಬಾದ್: ಛತ್ತೀಸಗಢದಲ್ಲಿ ಸಕ್ರಿಯರಾಗಿದ್ದ 20 ಮಹಿಳೆಯರು ಸೇರಿದಂತೆ 86 ನಕ್ಸಲರು, ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಶನಿವಾರ ಪೊಲೀಸರಿಗೆ ಶರಣಾಗಿದ್ದಾರೆ.
ಹಿಂಸಾತ್ಮಕ ಮಾರ್ಗ ತ್ಯಜಿಸಿ, ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನ ನಡೆಸಲು ಐಜಿಪಿ ಎಸ್. ಚಂದ್ರಶೇಖರ ರೆಡ್ಡಿ ಮುಂದೆ ನಕ್ಸಲರು ಶರಣಾಗಿದ್ದಾರೆ.
ಶರಣಾದವರಲ್ಲಿ ತಲಾ ನಾಲ್ವರು ಸಹಾಯಕ ಕಮಾಂಡರ್ ಕೇಡರ್‌ನವರು ಹಾಗೂ ನಿಷೇಧಿತ ಸಿಪಿಐ ಸದಸ್ಯರು. ಉಳಿದವರು ವಿವಿಧ ಸೇನಾದಳದ ಸದಸ್ಯರು. 81 ಮಂದಿ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯವರಾಗಿದ್ದರೆ, ಉಳಿದ ಐವರು ಮುಲುಗು ಜಿಲ್ಲೆಯವರು.
ಶರಣಾಗತರಾದ ನಾಲ್ವರು ಸಿಪಿಐ ಸದಸ್ಯರ ಸುಳಿವಿಗೆ ತಲಾ ₹4 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಭದ್ರಾದ್ರಿ ಕೊತ್ತಗೂಡೆಂ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಇಲ್ಲಿಯವರೆಗೂ 224 ನಕ್ಸಲರು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.