ADVERTISEMENT

ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೇರಿದರೆ ಉಚಿತ ವೈದ್ಯಕೀಯ ಸೌಲಭ್ಯ: ಎಎಪಿ ಭರವಸೆ

ಪಿಟಿಐ
Published 25 ಆಗಸ್ಟ್ 2022, 16:00 IST
Last Updated 25 ಆಗಸ್ಟ್ 2022, 16:00 IST
   

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ತಮಗೆ ಅಧಿಕಾರ ನೀಡಿದರೆ ಉಚಿತ ಹಾಗೂ ಗುಣಮಟ್ಟದವೈದ್ಯಕೀಯ ಸೇವೆಗಳನ್ನು ಒದಗಿಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಭರವಸೆ ನೀಡಿದೆ.

ತಾತ್ಕಾಲಿಕ ಶಿಕ್ಷಕರನ್ನು ಖಾಯಂಗೊಳಿಸಲಾಗುವುದು ಮತ್ತು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸುವ ಜೊತೆಗೆಇಲ್ಲಿನ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಾರದ ಹಿಂದಷ್ಟೇ ಹೇಳಿದ್ದಎಎಪಿ ಇದೀಗ ಹೊಸ ಆಶ್ವಾಸನೆ ನೀಡಿದೆ.

ಉನಾ ಜಿಲ್ಲೆಯಲ್ಲಿ ಗುರುವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಜನರು ಅಧಿಕಾರ ನೀಡಿದರೆ, ಉಚಿತವಾಗಿ ಔಷಧಗಳು ಮತ್ತು ವೈದ್ಯಕೀಯ ತಪಾಸಣೆ ಸೌಲಭ್ಯ ಒದಗಿಸಲಾಗುವುದು.ತಜ್ಞ ವೈದ್ಯರಿಂದ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಮುಂದುವರಿದು,ದೆಹಲಿ ಮತ್ತು ಪಂಜಾಬ್‌ನಲ್ಲಿ ಇರುವಂತೆ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗುವುದು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮಗೊಳಿಸಲಾಗುವುದು. ಅಪಘಾತ ಸಂದರ್ಭದಲ್ಲಿ ಗಾಯಗೊಳ್ಳುವ ರಾಜ್ಯದ ಪ್ರತಿ ಸಂತ್ರಸ್ತರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂಬ ಭರವಸೆ ನೀಡಿದರು. ಅಷ್ಟಲ್ಲದೆ,ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾಗುವ ಯೋಧರ ಕುಟುಂಬದವರಿಗೆ ₹ 1 ಕೋಟಿ ಪರಿಹಾರ ನೀಡಲಾಗುವುದು ಎಂದೂ ಆಶ್ವಾಸನೆ ನೀಡಿದ್ದಾರೆ.

ಇದಕ್ಕೂ ಮುನ್ನಸಿಸೋಡಿಯಾ ಅವರು,ಕಳೆದ 75 ವರ್ಷಗಳಲ್ಲಿ ಗುಣಮಟ್ಟದ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಲು ವಿಫಲವಾದ ನಾಯಕರ ಮನೆಗಳ ಮೇಲೆ ಇ.ಡಿ ಮತ್ತು ಸಿ.ಬಿ.ಐ ದಾಳಿಗಳನ್ನು ನಡೆಸಬೇಕಿತ್ತು. ಆದರೆ, ಉತ್ತಮ ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ಕಟ್ಟಿಸಿದವರ ಮನೆಗಳ ಮೇಲೆ ಅವರು ಇ.ಡಿ ಮತ್ತು ಸಿ.ಬಿ.ಐ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.

ಉಚಿತ ಸೇವೆಗಳ ಕುರಿತುಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರರು. ಆ ಬಗ್ಗೆ ಮಾತನಾಡಿದ ಪಂಜಾಬ್ ಸಿಎಂ ಮಾನ್‌, ಜನರಿಂದ ಪಡೆದ ಹಣವನ್ನು ಮಹಿಳೆಯರಿಗೆ ಉಚಿತ ಬಸ್‌ ಸೇವೆ ಒದಗಿಸುವ ಮೂಲಕ, ಉಚಿತ ಶಿಕ್ಷಣ ಮತ್ತು ಚಿಕಿತ್ಸೆ ಸೌಲಭ್ಯಗಳನ್ನು ಒಗಿಸುವ ಮೂಲಕ ದೆಹಲಿ ಸರ್ಕಾರವು ವಾಪಸ್‌ ನೀಡುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.