ನವದೆಹಲಿ: ನೂತನ ಮುಖ್ಯಮಂತ್ರಿ ಘೋಷಣೆ ಹಾಗೂ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿರುವ ಸಂಬಂಧ ಆಮ್ ಆದ್ಮಿ ಪಕ್ಷವು (ಎಎಪಿ) ಬಿಜೆಪಿ ವಿರುದ್ಧ ಸೋಮವಾರ ಕಿಡಿಕಾರಿದೆ.
ಎಎಪಿ ನಾಯಕಿ ಹಾಗೂ ದೆಹಲಿಯ ನಿಕಟಪೂರ್ವ ಮುಖ್ಯಮಂತ್ರಿ ಆತಿಶಿ ಅವರು, ಸರ್ಕಾರ ನಡೆಸುವ ಅಭ್ಯರ್ಥಿಯೇ ಬಿಜೆಪಿಯಲ್ಲಿ ಇಲ್ಲ ಎಂದು ಟೀಕಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಆತಿಶಿ, 'ಚುನಾವಣಾ ಫಲಿತಾಂಶ ಪ್ರಕಟವಾಗಿ 10 ದಿನವಾಗುತ್ತಿದೆ. ಬಿಜೆಪಿಯು ಫೆಬ್ರುವರಿ 9ರಂದೇ ಮುಖ್ಯಮಂತ್ರಿ ಹೆಸರು ಘೋಷಿಸಲಿದ್ದು, ಕ್ಯಾಬಿನೆಟ್ ರಚಿಸಿ, ತಕ್ಷಣವೇ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಿದೆ ಎಂದು ಜನರು ಭಾವಿಸಿದ್ದರು. ಆದರೆ, ಅವರ ಬಳಿ ದೆಹಲಿಯನ್ನು ಮುನ್ನಡೆಸುವ ಅಭ್ಯರ್ಥಿಯೇ ಇಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದು ಕುಟುಕಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ಯಾರ ಮೇಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಂಬಿಕೆ ಇಲ್ಲ ಎಂದಿರುವ ಎಎಪಿ ನಾಯಕಿ, ಕೇಸರಿ ಪಕ್ಷವು ದೂರದೃಷ್ಟಿ ಹೊಂದಿಲ್ಲ ಎಂದು ದೂರಿದ್ದಾರೆ.
'ಅವರು (ಶಾಸಕರು) ದೆಹಲಿಯ ಜನರನ್ನು ಲೂಟಿ ಮಾಡಲಿದ್ದಾರೆ ಅಷ್ಟೇ ಎಂಬುದು ಬಿಜೆಪಿಗೆ ಗೊತ್ತಿದೆ' ಎಂದಿರುವ ಆತಿಶಿ, 'ಸರ್ಕಾರವನ್ನು ನಡೆಸುವ ಸಾಮರ್ಥ್ಯ ಅವರಲ್ಲಿ ಇಲ್ಲದಿದ್ದರೆ, ಜನರಿಗಾಗಿ ಹೇಗೆ ಕೆಲಸ ಮಾಡುತ್ತಾರೆ?' ಎಂದು ಪ್ರಶ್ನಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಮತದಾನ ನಡೆದು, ಮೂರು ದಿನಗಳ ಬಳಿಕ (ಫೆಬ್ರುವರಿ 8ರಂದು) ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯು 48 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೇರಿದ್ದರೆ, ಎಎಪಿ 22 ಸ್ಥಾನಗಳನ್ನು ಜಯಿಸಿ, ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.