ADVERTISEMENT

ಎಂಎಸ್‌‍‍ಪಿ ಶಾಸನಬದ್ಧ ಆಗುವವರೆಗೂ ರೈತರ ಪ್ರತಿಭಟನೆ ನಿಲ್ಲದು: ವರುಣ್ ಗಾಂಧಿ

ಪಿಟಿಐ
Published 20 ನವೆಂಬರ್ 2021, 9:59 IST
Last Updated 20 ನವೆಂಬರ್ 2021, 9:59 IST
ವರುಣ್ ಗಾಂಧಿ
ವರುಣ್ ಗಾಂಧಿ   

ನವದೆಹಲಿ:‌ ‌ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯನ್ನು ಶಾಸನಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ವರುಣ್ ಗಾಂಧಿ ಮನವಿ ಮಾಡಿದ್ದು, ಈ ಬೇಡಿಕೆ ಈಡೇರದಿದ್ದರೆ ರೈತರ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸಚಿವ ಅಜಯ್‌ ಮಿಶ್ರಾ ಹೆಸರನ್ನು ಉಲ್ಲೇಖಿಸದೇ, ಲಖಿಂಪುರ– ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ಮೋದಿ ಅವರಿಗೆ ಧನ್ಯವಾದ ಹೇಳಿರುವ ಅವರು, ‘ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದರೆ, ಅನೇಕ ಅಮಾಯಕರ ಜೀವ ಉಳಿಯುತ್ತಿತ್ತು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಿರುವ ವರುಣ್, ‘ಈಬೇಡಿಕೆ ಈಡೇರದೇ ರೈತರ ಚಳವಳಿ ಕೊನೆಗೊಳ್ಳುವುದಿಲ್ಲ. ಈಗಾಗಲೇ ಅವರಲ್ಲಿ ಈ ಬಗ್ಗೆ ವ್ಯಾಪಕವಾದ ಆಕ್ರೋಶವಿದೆ. ಅದು ಒಂದಲ್ಲ ಒಂದು ರೂಪದಲ್ಲಿ ಹೊರಹೊಮ್ಮುತ್ತಲೇ ಇರುತ್ತದೆ. ಆದ್ದರಿಂದ ರೈತರ ಬೇಡಿಕೆ ಈಡೇರಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

ಈ ರೈತ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಒದಗಿಸುವಂತೆ ಆಗ್ರಹಿಸಿರುವ ಅವರು, ಪ್ರತಿಭಟನನಿರತ ರೈತರ ಮೇಲೆ ರಾಜಕೀಯ ಪ್ರೇರಣೆಯಿಂದ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.