ADVERTISEMENT

ಸುಶಾಂತ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ರಿಯಾ ಮನವಿ_ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 7:54 IST
Last Updated 19 ಆಗಸ್ಟ್ 2020, 7:54 IST
ನಟ ಸುಶಾಂತ್‌ ಸಿಂಗ್‌ ಮತ್ತು ನಟಿ ರಿಯಾ ಚಕ್ರವರ್ತಿ
ನಟ ಸುಶಾಂತ್‌ ಸಿಂಗ್‌ ಮತ್ತು ನಟಿ ರಿಯಾ ಚಕ್ರವರ್ತಿ   
""

ನವದೆಹಲಿ: ಜೂನ್‌ 14ರಂದು ಮುಂಬೈ ಬಾಂದ್ರಾದ ನಿವಾಸದಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ (34) ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದರು. ಆ ನಿಗೂಢ ಸಾವಿನ ತನಿಖೆಯನ್ನು ಸಿಬಿಐ ಮುಂದುವರಿಸಲು ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಆದೇಶ ಪ್ರಕಟಿಸಿದೆ.

ನ್ಯಾಯಮೂರ್ತಿ ಹೃಷಿಕೇಶ್ ರಾಯ್‌ ಅವರಿದ್ದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿತು. ಸಿಬಿಐ ತನಿಖೆ ನಡೆಸುವಂತೆ ಕೋರ್ಟ್‌ ಆದೇಶಿಸುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್‌ ಹೇಳಿತು.

ADVERTISEMENT

ಸುಶಾಂತ್‌ ತಂದೆ ಕೆ.ಕೆ.ಸಿಂಗ್ ಅವರ ದೂರು ಆಧರಿಸಿ ಪಟ್ನಾ ಪೊಲೀಸರು ಜುಲೈ 25ರಂದು ಎಫ್‌ಐಆರ್‌ ದಾಖಲಿಸಿದ್ದು ಸಮಂಜಸವಾದುದು. ಮುಂಬೈ ಪೊಲೀಸರು ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸದೆ ಕೇವಲ ವಿಚಾರಣೆಯನ್ನಷ್ಟೇ ಮುಂದುವರಿಸಿದ್ದನ್ನು ಕೋರ್ಟ್‌ ಪ್ರಸ್ತಾಪಿಸಿತು.

ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ದೂರು ದಾಖಲಿಸುವುದಿದ್ದರೂ ಸಿಬಿಐಗೆ ತಿಳಿಸಬೇಕು. ಸಿಬಿಐ ತನಿಖೆ ನಡೆಸಲು ವಿನಂತಿಸುವ ಅಧಿಕಾರ ಬಿಹಾರ ಸರ್ಕಾರಕ್ಕೆ ಇದೆ ಎಂದು ಕೋರ್ಟ್‌ ಪ್ರಕಟಿಸಿತು. 35 ಪುಟಗಳ ಆದೇಶ ನೀಡಲಾಗಿದೆ.

ಪಾಟ್ನಾದಲ್ಲಿ ಎಫ್‌ಐಆರ್ ದಾಖಲಿಸಿದ್ದರಿಂದ ಏನೂ ತಪ್ಪಾಗಿಲ್ಲ. ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಹಕರಿಸಬೇಕು ಹಾಗೂ ಮುಂಬೈ ಪೊಲೀಸರು ಅಗತ್ಯ ದಾಖಲೆಗಳನ್ನು ಸಿಬಿಐಗೆ ಒದಗಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ರಿಯಾ ಚಕ್ರವರ್ತಿ ಆರಂಭದಲ್ಲಿ ಸಿಬಿಐ ತನಿಖೆಯನ್ನು ಕೋರಿದ್ದರು. ನಂತರ ಆಕ್ಷೇಪಿಸಿದ್ದರು. ಕೊನೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದರೆ ಸಿಬಿಐ ತನಿಖೆಗೆ ಒಪ್ಪಿಕೊಳ್ಳುವುದಾಗಿ ಹೇಳಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪನ್ನು ಸುಶಾಂತ್‌ ಸಿಂಗ್ ರಜಪೂತ್ ಕುಟುಂಬದ ಪರ ವಕೀಲ ವಿಕಾಸ್‌ ಸಿಂಗ್ ಸ್ವಾಗತಿಸಿದ್ದಾರೆ. ‘ಇದು ಐತಿಹಾಸಿಕ ತೀರ್ಪು, ನ್ಯಾಯದ ಪರವಾಗಿರುವ ಆದೇಶ. ಮುಂದಿನ ದಿನಗಳಲ್ಲಿ ಸುಶಾಂತ್‌ ಸಿಂಗ್‌ ರಜಪೂತ್ ಕುಟುಂಬಕ್ಕೆ ನ್ಯಾಯ ಸಿಗಲಿದೆ' ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌ ಆದೇಶ ಪ್ರಕಟವಾಗುತ್ತಿದ್ದಂತೆ ಸಿಬಿಐ ಟೇಕ್ಸ್‌ ಓವರ್‌ ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಸುಶಾಂತ್‌ ಸೋದರಿ ಮೀತು ಸಿಂಗ್‌, ನಟಿ ಅಂಕಿಯಾ ಲೋಖಂಡೆ, ಕಂಗನಾ ರನೌತ್ ಸೇರಿದಂತೆ ಹಲವು ಮಂದಿ ತೀರ್ಪು ಸ್ವಾಗತಿಸಿ ಟ್ವೀಟಿಸಿದ್ದಾರೆ.

'ಸುಪ್ರೀಂ ಕೋರ್ಟ್ ತೀರ್ಪಿನಿಂದ ಖುಷಿಯಾಗಿದೆ. ಅನ್ಯಾಯದ ವಿರುದ್ಧ ನ್ಯಾಯದ ಜಯ. ಇದು 130 ಕೋಟಿ ಭಾರತೀಯರ ಭಾವನೆಗಳಿಗೆ ಜಯ. ದೇಶದ ಜನರಲ್ಲಿ ಸುಪ್ರೀಂಕೋರ್ಟ್‌ ಬಗ್ಗೆ ಗೌರವ ಹೆಚ್ಚಿಸಿದೆ. ಸುಶಾಂತ್ ಸಿಂಗ್ ರಜಪೂತ್ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ಹುಟ್ಟಿದೆ. ನಮ್ಮ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು, ತನಿಖೆ ನಡೆಸಲು ಅವಕಾಶ ಕೊಡಲಿಲ್ಲ. ಪೊಲೀಸರನ್ನು ಕ್ವಾರಂಟೈನ್ ಮಾಡಿದ್ದರು. ಈಗ ಕಾನೂನು ಮತ್ತು ಸಂವಿಧಾನಾತ್ಮಕವಾಗಿ ತನಿಖೆ ಮುಂದುವರಿಯಲಿದೆ' ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಪೊಲೀಸರು ಅನೈತಿಕವಾಗಿ ಮತ್ತು ವೃತ್ತಿಪರತೆ ಮರೆತು ಕೆಲಸ ಮಾಡಿದ್ದರು. ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಹೋರಾಟವಲ್ಲ. ಇಡೀ ದೇಶ ನ್ಯಾಯ ಕೇಳುತ್ತಿದೆ. ನಾವು ಮಾಡಿದ್ದು ಸರಿಯೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಬಿಹಾರ ಪೊಲೀಸರ ಗುಪ್ತಚರ ವ್ಯವಸ್ಥೆ ಮತ್ತು ಕಾನೂನು ಪಾಲನೆ ಬಗ್ಗೆ ದೇಶಕ್ಕೆ ಗೌರವ ಮೂಡಿದೆ. ಇದು ಹೈಪ್ರೊಫೈಲ್ ಕೇಸ್. ತನಿಖೆಗೆ ಎಷ್ಟು ದಿನ ಬೇಕಾಗಬಹುದು ಎಂದು ಹೇಳಲು ಅಗುವುದಿಲ್ಲ. ಸಾಕಷ್ಟು ಸಮಯ ಹಿಡಿಯಬಹುದು ಎಂದಿದ್ದಾರೆ.

'ನ್ಯಾಯದ ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ಹಾಗೂ ಸುಪ್ರೀಂ ಕೋರ್ಟ್‌ಗೂ ನಮ್ಮ ಕುಟುಂಬದಿಂದ ಧನ್ಯವಾದಗಳು. ಸುಶಾಂತ್‌ಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಮೂಡಿದೆ' ಎಂದು ಬಿಹಾರ ಬಿಜೆಪಿ ಶಾಸಕ ಮತ್ತು ಸುಶಾಂತ್‌ ಸಂಬಂಧಿ ನೀರಜ್‌ ಸಿಂಗ್‌ ಬಬ್ಲೂ ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ...

ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಗುರುವಾರ ಲಿಖಿತ ಹೇಳಿಕೆ ದಾಖಲಿಸಿದೆ ಹಾಗೂ ರಿಯಾ ಸಹ ಹೇಳಿಕೆ ದಾಖಲಿಸಿದ್ದರು. ರಿಯಾ ಅರ್ಜಿ ವಜಾಗೊಳಿಸಲು ಬಿಹಾರ ಸರ್ಕಾರ ಕೋರಿದೆ. ಸರ್ಕಾರದ ವಕೀಲ ಕೇಶವ ಮೋಹನ್ , ಸಿಬಿಐಗೆ ಪೂರ್ಣಪ್ರಮಾಣದಲ್ಲಿ ತನಿಖೆ ನಡೆಸಲು ಅವಕಾಶವಿದ್ದು, ಯಾವುದೇ ತೊಡಕು ಇರಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

'ತನ್ನ ವ್ಯಾಪ್ತಿಗೇ ಬಾರದ ಬಿಹಾರ ಪೊಲೀಸರ ಮನವಿ ಮೇರೆಗೆ ಪ್ರಕರಣ ಸಿಬಿಐಗೆ ವರ್ಗಾಯಿಸಲಾಗಿದೆ' ಎಂದು ರಿಯಾ ಹೇಳಿಕೆ ನೀಡಿದ್ದರು. ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿದೆ.

ಸುಶಾಂತ್ ಸಿಂಗ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು, ನಟಿ ರಿಯಾ ಮತ್ತು ಅವರ ಕುಟುಂಬದವರ ವಿರುದ್ಧ ಜುಲೈ 25ರಂದು ಪಟ್ನಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ರಿಯಾ, ಆಕೆಯ ಪೋಷಕರಾದ ಇಂದ್ರಜಿತ್, ಸಂಧ್ಯಾಚಕ್ರವರ್ತಿ, ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡಾ ಮತ್ತು ಶೃತಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಸುಶಾಂತ್‌ ಮತ್ತು ರಿಯಾ

ಜುಲೈ 31 ರಂದು ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೆ.ಕೆ.ಸಿಂಗ್ ಆರೋಪಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ರಿಯಾ ವಿರುದ್ಧ ದೂರು ದಾಖಲಿಸಿ, ವಿಚಾರಣೆ ನಡೆಸುತ್ತಿದೆ.

'ಇಡೀ ದೇಶವೇ ಇಂದು ಸುಪ್ರೀಂ ಕೋರ್ಟ್‌ ಆದೇಶಕ್ಕಾಗಿ ಎದುರು ನೋಡುತ್ತಿದೆ' ಎಂದು ಬಿಹಾರದ ಡಿಜಿಪಿ ಗುಪ್ತೇಶ್ವರ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ.

* ಸುಪ್ರೀಂ ಕೋರ್ಟ್‌ ಆದೇಶ ಪ್ರಕಟವಾದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ– ಅನಿಲ್‌ ದೇಶ್‌ಮುಖ್, ಮಹಾರಾಷ್ಟ್ರ ಗೃಹ ಸಚಿವ

ಇನ್ನಷ್ಟು ಓದು...

1. ಸುಶಾಂತ್‌ಗೆ ರಿಯಾ ಚಕ್ರವರ್ತಿ ಭಾವುಕ ಪತ್ರ
2. ಸುಶಾಂತ್‌ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಸುಬ್ರಮಣಿಯನ್‌ ಪತ್ರ ಅಂಗೀಕರಿಸಿದ ಮೋದಿ
3. ಸುಶಾಂತ್‌ ಆತ್ಮಹತ್ಯೆ: ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಪೊಲೀಸರಿಗೆ ದೂರು
4. ಒಂದು ವರ್ಷ ಸುಶಾಂತ್‌ ಜೊತೆಯಲ್ಲಿದ್ದೆ, ಜೂನ್‌ 8ರಂದು ತೊರೆದು ಹೋಗಿದ್ದೆ: ರಿಯಾ
5. ಸುಶಾಂತ್‌ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ: ಆರು ಮಂದಿ ಹೇಳಿಕೆ ದಾಖಲು
6. ನಟ ಸುಶಾಂತ್‌ ಆತ್ಮಹತ್ಯೆ: ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ನಿತೀಶ್‌ ಕುಮಾರ್‌
7. ಸುಶಾಂತ್‌ ಸಿಂಗ್‌ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟಿ ರಿಯಾಗೆ ಇಡಿ ಸಮನ್ಸ್‌
8. ಸುಶಾಂತ್‌ ಸಿಂಗ್‌ ಪ್ರಕರಣ: ರಿಯಾ ಚಕ್ರವರ್ತಿ ವಿರುದ್ಧ ಸಿಬಿಐನಿಂದ ಎಫ್‌ಐಆರ್
9. ನನ್ನ ವಿರುದ್ಧ ಬಿಹಾರದಲ್ಲಿ ಪ್ರಕರಣ ದಾಖಲಾಗಲು ನಿತೀಶ್‌ ಕಾರಣ : ರಿಯಾ ಚಕ್ರವರ್ತಿ
10. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಯಾ, ಕುಟುಂಬ ಸದಸ್ಯರನ್ನು ಪ್ರಶ್ನಿಸಿದ ‘ಇಡಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.