ADVERTISEMENT

ಬಿಎಸ್‌ವೈ ಸೇರಿ ತ್ರಿಮೂರ್ತಿಗಳು ನನ್ನ ಅಡ್ರೆಸ್‌ನಲ್ಲಿ ನಿಂತಿದ್ದರು: ಎಚ್‌ಡಿಕೆ

ನಾನು ದೇವೇಗೌಡರ ಮಗ ಕುಮಾರಸ್ವಾಮಿ ಎಂದು ಸಿನಿಮಾ ಶೈಲಿಯಲ್ಲಿ ಟ್ವೀಟ್‌ ಹೇಳಿಕೆ ನೀಡಿದ್ದಾರೆ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 15:28 IST
Last Updated 24 ಡಿಸೆಂಬರ್ 2019, 15:28 IST
   

ಬೆಂಗಳೂರು: 2006ರಕ್ಕೂ ಮೊದಲು ಕೇವಲ ಮಂತ್ರಿ ಸ್ಥಾನಕ್ಕಾಗಿ ನನ್ನ ಅಡ್ರೆಸ್‌ ಹುಡುಕಿಕೊಂಡು ಬಂದಿದ್ದವರು ಬಿ.ಎಸ್‌ ಯಡಿಯೂರಪ್ಪ ಮಾತ್ರವಲ್ಲ. ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಅವರೂ ನನ್ನ ಅಡ್ರೆಸ್‌ನಲ್ಲಿ ನಿಂತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಹೊಸ ವಿಷಯ ಪ್ರಸ್ತಾಪಿಸಿದ್ದಾರೆ.

ಯಡಿಯೂರಪ್ಪ ಮತ್ತು ತಮ್ಮ ನಡುವಿನ ‘ಅಡ್ರೆಸ್‌’ ವಾಗ್ವಾದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಎಚ್‌.ಡಿ ಕುಮಾರಸ್ವಾಮಿ ಮಂಗಳವಾರ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ADVERTISEMENT

‘ಅನರ್ಹರಿಗಾಗಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿ ನಾಯಕರು ನನ್ನ ಅಡ್ರೆಸ್ ಹುಡುಕುತ್ತಿದ್ದಾರೆ. ನನ್ನ ಅಡ್ರೆಸ್ ಕೇಳಿದ ಬಿಎಸ್ವೈ ಸೂಕ್ತ ಉತ್ತರ ಪಡೆದುಕೊಂಡರು. ಈಗ 'ದೊಡ್ಡ ದೊಡ್ಡ ನಾಯಕರ' ಮೂಲಕ ನನ್ನ ಅಡ್ರೆಸ್ ಕೇಳಿಸುತ್ತಿದ್ದಾರೆ. ಅವರಿಗೆಲ್ಲ ಉತ್ತರಿಸುವಷ್ಟು ದೊಡ್ಡವನಲ್ಲದಿದ್ದರೂ ನಾನೇ ಉತ್ತರಿಸುವೆ. ನಾನು ಹಾಸನದ ಹರದನಹಳ್ಳಿಯ 'ದೇವೇಗೌಡ'ರ ಮಗ ಕುಮಾರಸ್ವಾಮಿ. ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ನನ್ನ ಶಾಶ್ವತ ವಿಳಾಸ,’ ಎಂದು ಅವರು ಸಿನಿಮಾ ಶೈಲಿಯಲ್ಲಿ ಟ್ವೀಟ್‌ ಹೇಳಿಕೆ ನೀಡಿದ್ದಾರೆ.

‘ಅಧಿಕಾರದ ಮದ ಕೆಲ ರಾಜಕಾರಣಿಗಳಲ್ಲಿ ಮರೆವು ತರಿಸಿದೆ. ನನ್ನ ಅಡ್ರೆಸ್ ಕೂಡಾ ಮರೆತಿದ್ದಾರೆ. 2006ಕ್ಕೂ ಮುನ್ನ ಮಂತ್ರಿಗಿರಿಗಾಗಿ ನನ್ನ ಅಡ್ರೆಸ್ ಹುಡುಕಿಕೊಂಡು ಬಂದವರು ಬಿಎಸ್ವೈ ಮಾತ್ರ ಅಲ್ಲ. ಬಿಎಸ್ವೈ, ಶೆಟ್ಟರ್, ಈಶ್ವರಪ್ಪ. ಈ ತ್ರಿಮೂರ್ತಿಗಳು ನನ್ನ ಅಡ್ರೆಸ್ನಲ್ಲಿ ಬಂದು ನಿಂತಿದ್ದರು. ನನ್ನನ್ನು ಕೆಣಕಿ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ,’ ಎಂದು ಅವರು ಗೇಲಿ ಮಾಡಿದ್ದಾರೆ.

‘ನಾನು ಈಗಲೂ ಹೇಳುತ್ತೇನೆ 'ಮರೆವು ರೋಗ' ಬಂದವರಿಗೆಲ್ಲ ಶೀಘ್ರವೇ ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ... ನನ್ನ ಜನ ನನಗೆ ಕೊಟ್ಟ ಬಲ,’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.