ಗುವಾಹಟಿ: ಭಾರತವು ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯುಟಿ) ಅಮಾನತಿಲ್ಲಿಟ್ಟ ಬಳಿಕ, ‘ಭಾರತಕ್ಕೆ ಬ್ರಹ್ಮಪುತ್ರ ನೀರಿನ ಹರಿವನ್ನು ಚೀನಾ ತಡೆದರೆ ಏನಾಗಬಹುದು’ ಎಂಬ ಹೊಸ ‘ಬೆದರಿಕೆಯ ಸಂಕಥನ’ವನ್ನು ಪಾಕಿಸ್ತಾನ ಹುಟ್ಟುಹಾಕುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಟೀಕಿಸಿದ್ದಾರೆ.
‘ಬ್ರಹ್ಮಪುತ್ರ ನೀರಿನ ಹರಿವನ್ನು ತಡೆಯುವ ಕುರಿತಂತೆ ಯಾವುದೇ ಘೋಷಣೆಯನ್ನು ಚೀನಾ ಮಾಡಿಲ್ಲ. ಒಂದು ವೇಳೆ ಇಂತಹ ಕ್ರಮಕ್ಕೆ ಚೀನಾ ಮುಂದಾದಲ್ಲಿ, ಅದು ಅಸ್ಸಾಂನಲ್ಲಿ ಪ್ರತಿ ವರ್ಷ ಸಂಭವಿಸುವ ಪ್ರವಾಹಗಳನ್ನು ದೂರ ಮಾಡಲು ನೆರವಾಗಲಿದೆ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ಈಶಾನ್ಯ ಭಾರತದಲ್ಲಿ ಬೀಳುವ ಮಳೆಯೇ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಳಕ್ಕೆ ಪ್ರಮುಖ ಕಾರಣ. ಬ್ರಹ್ಮಪುತ್ರದಲ್ಲಿ ಉಂಟಾಗುವ ಪ್ರವಾಹಕ್ಕೆ ಹಿಮಬಂಡೆಗಳ ಕರಗುವಿಕೆ ಹಾಗೂ ಟಿಬೆಟ್‌ನಲ್ಲಿ ಸುರಿಯುವ ಮಳೆಯ ಕೊಡುಗೆ ಶೇ 30–35 ಮಾತ್ರ’ ಎಂದಿದ್ದಾರೆ.
‘ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿಡುವ ನಿರ್ಧಾರ ತೆಗೆದುಕೊಂಡ ನಂತರ ಪಾಕಿಸ್ತಾನ ಇಂತಹ ಬೆದರಿಕೆಯ ಸಂಕಥನವನ್ನು ಸೃಷ್ಟಿಸುತ್ತಿದೆ. ಇಂತಹ ಸಂಕಥನಗಳಿಗೆ ನಾವು ಹೆದರಬೇಕಿಲ್ಲ. ಆದರೆ, ವಾಸ್ತವ ಸಂಗತಿಗಳು ಹಾಗೂ ಸ್ಪಷ್ಟತೆಯೊಂದಿಗೆ ಇಂತಹ ಮಿಥ್ಯೆಗಳನ್ನು ಬಯಲು ಮಾಡೋಣ’ ಎಂದೂ ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.