ADVERTISEMENT

ವರ್ಷಕ್ಕೂ ಅಧಿಕ ಕಾಲದ ‘ರೈತ ಚಳವಳಿ’ ಅಂತ್ಯ: ಊರುಗಳತ್ತ ಹೆಜ್ಜೆ ಹಾಕಿದ ಹೋರಾಟಗಾರರು

ಪಿಟಿಐ
Published 11 ಡಿಸೆಂಬರ್ 2021, 5:57 IST
Last Updated 11 ಡಿಸೆಂಬರ್ 2021, 5:57 IST
ರಸ್ತೆಯಲ್ಲಿದ್ದ ವಸ್ತುಗಳನ್ನು ತೆರವು ಮಾಡಿದ ರೈತರು – ಎಎಫ್‌ಪಿ ಚಿತ್ರ
ರಸ್ತೆಯಲ್ಲಿದ್ದ ವಸ್ತುಗಳನ್ನು ತೆರವು ಮಾಡಿದ ರೈತರು – ಎಎಫ್‌ಪಿ ಚಿತ್ರ    

ನವದೆಹಲಿ: ನೂರಾರು ಟ್ರ್ಯಾಕ್ಟರ್‌ಗಳೊಂದಿಗೆ ಬಂದು, ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿ ಹೊರ ವಲಯದ ಸಿಂಘು, ಟಿಕ್ರಿ, ಘಾಜಿಪುರ ಬಳಿ ಬೀಡು ಬಿಟ್ಟಿದ್ದ ವಿವಿಧ ರಾಜ್ಯಗಳ ರೈತರು, ಶುಕ್ರವಾರ ಬೆಳಗ್ಗೆ ಜಯದ ಗರ್ವದೊಂದಿಗೆ, ಹೋರಾಟದ ನೆನಪುಗಳೊಂದಿಗೆ ಅವರ ಊರುಗಳತ್ತ ಹೆಜ್ಜೆ ಹಾಕಿದರು.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವ ಕೇಂದ್ರ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ರೈತರಿಗೆ ಭರವಸೆ ನೀಡಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆದಿರುವ ರೈತರು, ಹೋರಾಟದ ಸ್ಥಳದಲ್ಲಿ ಹೆದ್ದಾರಿಗಳಿಗೆ ಹಾಕಿದ್ದ ತಡೆಗಳನ್ನು ತೆಗೆದು ಹಾಕಿದರು. ನಂತರ 'ಊರುಗಳತ್ತ ವಿಜಯ ಯಾತ್ರೆ' ಕೈಗೊಂಡರು. ಹೋರಾಟದ ನೆಲವನ್ನು ತೊರೆಯುವಾಗ ರೈತರು ಭಾವುಕರಾಗಿದ್ದೂ ಕಂಡುಬಂತು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಸಾವಿರಾರು ರೈತರು ವರ್ಷಗಳಿಗೂ ಅಧಿಕ ಕಾಲದಿಂದ ದೆಹಲಿಯ ಹೊರವಲಯದಲ್ಲಿ ಹೋರಾಟದಲ್ಲಿ ತೊಡಗಿದ್ದರು.

ADVERTISEMENT

ವರ್ಣರಂಜಿತ ದೀಪಗಳಿಂದ ಅಲಂಕರಿಸಲ್ಪಟ್ಟ ಟ್ರ್ಯಾಕ್ಟರ್‌ಗಳು ಪ್ರತಿಭಟನಾ ಸ್ಥಳಗಳಿಂದ ವಿಜಯದ ಹಾಡುಗಳನ್ನು ಮೊಳಗಿಸಿ ಹೊರಟವು. ವೃದ್ಧರು ತಮ್ಮ ಬಣ್ಣಬಣ್ಣದ ರುಮಾಲುಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರೆ, ಯುವಕರು ನೃತ್ಯ ಮಾಡಿ ಸಂತಸ ವ್ಯಕ್ತಪಡಿಸಿದರು.

‘ಕಳೆದ ಒಂದು ವರ್ಷದಿಂದ ಸಿಂಘು ಗಡಿ ನಮ್ಮ ತವರು ಮನೆಯಾಗಿತ್ತು. ಈ ಆಂದೋಲನವು ನಮ್ಮೆಲ್ಲರನ್ನು (ರೈತರನ್ನು) ಒಗ್ಗೂಡಿಸಿತು. ನಾವು ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಕರಾಳ ಕಾನೂನಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ್ದೇವೆ. ಇದೊಂದು ಐತಿಹಾಸಿಕ ಕ್ಷಣ. ಚಳವಳಿಯು ವಿಜಯದ ಫಲಿತಾಂಶ ನೀಡಿದೆ’ ಎಂದು ಪಂಜಾಬ್‌ನ ಮೋಗಾದ ರೈತ ಕುಲ್ಜೀತ್ ಸಿಂಗ್ ಔಲಾಖ್ ಅವರು ತಮ್ಮ ಮನೆಗೆ ಹಿಂದಿರುಗುವ ಮೊದಲು ಹೇಳಿದರು.

ಎಲ್ಲರೂ ಪರಸ್ಪರರನ್ನು ಅ‍ಪ್ಪಿಕೊಂಡು ಭಾವುಕ ವಿದಾಯ ಹೇಳಿದರು. ರೈತರು ಡಿ. 11 ಅನ್ನು ವಿಜಯ ದಿನವೆಂದು ಆಚರಿಸುತ್ತಿದ್ದಾರೆ.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ–2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ–2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ–2020 ಅನ್ನು ರದ್ದುಗೊಳಿಸುವ ಮಸೂದೆಯನ್ನು ಸಂಸತ್ತು ನವೆಂಬರ್ 29 ರಂದು ಅಂಗೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.