ADVERTISEMENT

ಮೇ ಅಂತ್ಯದ ಹೊತ್ತಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ 8 ಲಕ್ಷ ಮಂದಿಗೆ ಸೋಂಕು: ಆತಂಕ

ಪಿಟಿಐ
Published 24 ಏಪ್ರಿಲ್ 2020, 12:55 IST
Last Updated 24 ಏಪ್ರಿಲ್ 2020, 12:55 IST
ಅಹಮದಾಬಾದ್‌ನ ರಸ್ತೆಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುತ್ತಿರುವುದು
ಅಹಮದಾಬಾದ್‌ನ ರಸ್ತೆಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುತ್ತಿರುವುದು    

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಾಲ್ಕು ದಿನಗಳಿಗೊಮ್ಮೆ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಹೀಗಾಗಿ ಆತಂಕ ವ್ಯಕ್ತಪಡಿಸಿರುವ ಪಾಲಿಕೆ ಆಯುಕ್ತ, ಹೀಗೇ ಹೋದರೆ, ಮೇ ಅಂತ್ಯದ ಹೊತ್ತಿಗೆ ಅಹಮದಾಬಾದ್‌ನಲ್ಲಿ 8 ಲಕ್ಷ ಮಂದಿಗೆ ಸೋಂಕು ಹರಡಲಿದೆ ಎಂದು ಹೇಳಿದ್ದಾರೆ.

ಸದ್ಯ ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಇಲ್ಲಿಯವರೆಗೆ 1,638 ಕೊರೊನಾ ವೈರಸ್ ಪ್ರಕರಣಗಳು ದೃಢವಾಗಿವೆ. ಗುಜರಾತ್‌ನ ಯಾವುದೇ ನಗರಕ್ಕಿಂತಲೂ ಇದು ಅತಿ ಹೆಚ್ಚು.

ಈ ಪೈಕಿ 1,459 ಪ್ರಕರಣಗಳು ಸಕ್ರಿಯವಾಗಿದ್ದರೆ, 75 ಮಂದಿ ಮೃತಪಟ್ಟಿದ್ದಾರೆ. 105 ಮಂದಿ ಗುಣಮುಖರಾಗಿದ್ದಾರೆ ಎಂದು ಅಹಮದಾಬಾದ್‌ನ ಮುನ್ಸಿಪಲ್‌ನ ಅಯುಕ್ತ ವಿಜಯ್‌ ನೆಹ್ರಾ ಹೇಳಿದ್ದಾರೆ.

ADVERTISEMENT

‘ಸದ್ಯ ಅಹಮದಾಬಾದ್‌ನಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಪ್ರತಿ ನಾಲ್ಕು ದಿನಗಳಲ್ಲಿ ದ್ವಿಗುಣವಾಗುತ್ತಾ ಹೋಗುತ್ತಿದೆ. ಹೀಗೇ ಹೋದರೆ, ಮೇ 15ರ ಹೊತ್ತಿಗೆ ನಗರದಲ್ಲಿ 50 ಸಾವಿರ ಪ್ರಕರಣಗಳು ಆಗಲಿವೆ. ಮುಂದುವರಿದು ಮೇ ಅಂತ್ಯದ ಹೊತ್ತಿಗೆ ಅದು 8 ಲಕ್ಷಕ್ಕೆ ತಲುಪುತ್ತದೆ,’ ಎಂದು ಹೇಳಿದರು.

‘ದ್ವಿಗುಣಗೊಳ್ಳುವ ಈ ಪ್ರಕ್ರಿಯೆನ್ನು 8 ದಿನಗಳಿಗೆ ಇಳಿಸುವುದು ಸದ್ಯ ನಮ್ಮ ಮುಂದಿರುವ ಗುರಿ. ಇದು ತೀರ ಕಷ್ಟದ ಕೆಲಸ. ಯಾಕೆಂದರೆ, ಜಗತ್ತಿನಲ್ಲಿ ಈ ಸಾಧನೆ ಮಾಡಿದ್ದು ಒಂದೇ ದೇಶ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಈಗ ನಾಲ್ಕು ದಿನಗಳಲ್ಲಿ ಸೋಂಕು ದ್ವಿಗುಣಗೊಳ್ಳುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಮಾತ್ರ 8 ದಿನಗಳಲ್ಲಿ ಪ್ರಕರಣಗಳು ದ್ವಿಗುಣಗೊಳ್ಳುತ್ತಿದೆ,’ ಎಂದು ಆಯುಕ್ತರು ಹೇಳಿದ್ದಾರೆ.

‘ಸೋಂಕು ದ್ವಿಗುಣಗೊಳ್ಳುವ ವೇಗವನ್ನು 8 ದಿನಕ್ಕೆ ಇಳಿಸುವ ವಿಶ್ವಾಸ ನಮಗಿದೆ,’ ಎಂದೂ ಇದೇ ವೇಳೆ ಆಯುಕ್ತರು ಹೇಳಿಕೊಂಡಿದ್ದಾರೆ.

ಅಹಮದಾಬಾದ್‌ನಲ್ಲಿ ಗಂಭೀರ ಪರಿಸ್ಥಿತಿ

ಗುಜರಾತ್‌ನ ಅಹಮದಾಬಾದ್‌, ಸೂರತ್‌, ಥಾಣೆ, ಹೈದರಾಬಾದ್ ಮತ್ತು ಚೆನ್ನೈ‌ ನಗರಗಳಲ್ಲಿ ಕೊರೊನಾ ವೈರಸ್‌ ನಿಯಂತ್ರಣವನ್ನೂ ಮೀರಿ ವೃದ್ಧಿಯಾಗುತ್ತಿದೆ. ಹೀಗಾಗಿ ಈ ನಗರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.