ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಅಧಿಕಾರಿಗಳು ಸೋಮವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಮೃತದೇಹವನ್ನು ಹಸ್ತಾಂತರಿಸುವ ವೇಳೆ ರೂಪಾನಿ ಅವರ ಪತ್ನಿ ಅಂಜಲಿ ಮತ್ತು ಕುಟುಂಬ ಸದಸ್ಯರು ಅಹಮಾದಾಬಾದ್ ನಗರ ಆಸ್ಪತ್ರೆಯಲ್ಲಿ ಹಾಜರಿದ್ದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಸಚಿವರು ಕೂಡ ಉಪಸ್ಥಿತರಿದ್ದರು.
ರೂಪಾನಿ ಅವರ ದೇಹವು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದು, ಡಿಎನ್‌ಎ ಪರೀಕ್ಷೆ ಮೂಲಕ ಭಾನುವಾರ ಪತ್ತೆ ಮಾಡಲಾಯಿತು.
ರೂಪಾನಿ ಅವರ ಮೃತದೇಹವನ್ನು ಅವರ ಹುಟ್ಟೂರಾದ ರಾಜ್‌ಕೋಟ್‌ಗೆ ವಿಮಾನದಲ್ಲಿ ಸಾಗಿಸಲಾಗುತ್ತದೆ. ಅಲ್ಲಿ ಒಂದು ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ನಂತರ ಅಂತಿಮ ವಿಧಿವಿಧಾನಗಳು ನಡೆಸಲಾಗುತ್ತದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಅವರು ರೂಪಾನಿ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸುವ ನಿರೀಕ್ಷೆಯಿದೆ.
ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಸ್ಪಲ್ಪ ಕ್ಷಣದಲ್ಲೇ ಪತನಗೊಂಡಿತ್ತು. ದುರಂತದಲ್ಲಿ ರೂಪಾನಿ ಸೇರಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.