
ಸಾಂಗ್ಲಿ: ಏರ್ ಇಂಡಿಯಾ ವಿಮಾನ(ಎಐ171) ದುರಂತದ ತನಿಖೆಯ ಕುರಿತಾದ ವಿದೇಶಿ ಮಾಧ್ಯಮ ವರದಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಮುರಳೀಧರ್ ಮೊಹೋಲ್ ನಿರಾಕರಿಸಿದ್ದು, ಈ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ತನಿಖಾ ಸಂಸ್ಥೆಗಳು ವಿಮಾನ ದುರಂತದ ಬಗ್ಗೆ ತನಿಖೆ ನಡೆಸುತ್ತಿವೆ. ನಾವು ನಮ್ಮದೇ ಸಂಸ್ಥೆಗಳಲ್ಲಿ ನಂಬಿಕೆ ಇಡಬೇಕೇ ಅಥವಾ ಹೊರಗಿನವರ ಮೇಲೆ ನಂಬಿಕೆ ಇಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ಸದ್ಯ ತನಿಖೆ ಪ್ರಗತಿಯಲ್ಲಿದೆ. ಅಂತಿಮ ವರದಿ ಬಂದ ನಂತರವೇ ಅದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸ್ಥೆಗಳು ತಮ್ಮ ವರದಿಯಲ್ಲಿ ಪೈಲಟ್‌ಗಳನ್ನು ದೂಷಿಸಿವೆ ಎಂದು ಇಟಾಲಿಯನ್ ದಿನಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು.
ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾಗೆ ಸೇರಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು 2025ರ ಜೂನ್ 12ರಂದು ಪತನಗೊಂಡಿದ್ದರ ಹಿಂದೆ, ಉದ್ದೇಶಪೂರ್ವಕವಾಗಿ ಇಂಧನ ಗುಂಡಿಯನ್ನು ಬಂದ್ ಮಾಡಲಾಗಿತ್ತು ಎಂದು ಇಟಲಿಯ ಕೊರಿಯರ್ ಡೆಲ್ಲಾ ಸೆರಾ ಎಂಬ ಮಾಧ್ಯಮ ವರದಿ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ, ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ಇನ್ನೂ ಪ್ರಗತಿಯಲ್ಲಿದೆ . ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿತ್ತು.
2025ರ ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ ಒಟ್ಟು 260 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.