ಅಹಮದಾಬಾದ್(ಗುಜರಾತ್): ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
‘ಇಂದು ಬೆಳಿಗ್ಗೆ 11.10ರ ವೇಳೆ ಡಿಎನ್‌ಎ ಮಾದರಿ ಪರಿಶೀಲನೆ ನಡೆಸಲಾಗಿದ್ದು, ವಿಜಯ್ ರೂಪಾನಿ ಅವರ ಡಿಎನ್ಎ ಮಾದರಿ ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ ಹೊಂದಿಕೆಯಾಗಿದೆ’ ಎಂದು ರಾಜ್ಯ ಗೃಹ ಸಚಿವ ಹರ್ಷ ಸಂಘವಿ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರೂಪಾನಿ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಡಿಎನ್‌ಎ ಹೊಂದಾಣಿಕೆ ಆಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದು ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
‘ಡಿಎನ್‌ಎ ಪರೀಕ್ಷೆ ಮೂಲಕ ಇಲ್ಲಿಯವರೆಗೆ 32 ಮೃತದೇಹವನ್ನು ಗುರುತಿಸಲಾಗಿದೆ. 14 ಮೃತದೇಹಗಳನ್ನು ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ’ ಎಂದು ವೈದ್ಯ ರಜನೀಶ್ ಪಟೇಲ್ ಹೇಳಿದ್ದಾರೆ.
ಜೂನ್ 12ರ ಮಧ್ಯಾಹ್ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ದುರಂತದಲ್ಲಿ ರೂಪಾನಿ ಸೇರಿದಂತೆ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದರು. ವಿಮಾನವು ಮೇಘನಿನಗರದ ವೈದ್ಯಕೀಯ ಕಾಲೇಜಿನ ಮೇಲೆ ಅಪ್ಪಳಿಸಿದ್ದರಿಂದ ಐವರು ವೈದ್ಯಕೀಯ ವಿದ್ಯಾರ್ಥಿಗಳೂ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.