ADVERTISEMENT

ಪ್ರಯಾಣಿಕನಿಗೆ ರಕ್ತ ಬರುವಂತೆ ಗಂಭೀರ ಹಲ್ಲೆ: ಏರ್ ಇಂಡಿಯಾ ಪೈಲಟ್‌ ಅಮಾನತು

ಪಿಟಿಐ
Published 20 ಡಿಸೆಂಬರ್ 2025, 7:04 IST
Last Updated 20 ಡಿಸೆಂಬರ್ 2025, 7:04 IST
<div class="paragraphs"><p>ಪ್ರಯಾಣಿಕ ಅಂಕಿತ್ ದಿವಾನ್ ಮತ್ತು&nbsp;ಏರ್ ಇಂಡಿಯಾ ಪೈಲಟ್‌ ವೀರೇಂದ್ರ ಸೆಜ್ವಾಲ್&nbsp;</p></div>

ಪ್ರಯಾಣಿಕ ಅಂಕಿತ್ ದಿವಾನ್ ಮತ್ತು ಏರ್ ಇಂಡಿಯಾ ಪೈಲಟ್‌ ವೀರೇಂದ್ರ ಸೆಜ್ವಾಲ್ 

   

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್‌ವೊಬ್ಬರು ಪ್ರಯಾಣಿಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ತನಿಖೆ ಪೂರ್ಣಗೊಳ್ಳುವವರೆಗೂ ಪೈಲಟ್‌ ಅನ್ನು ಅಮಾನತುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಘಟನೆ ಕುರಿತು ತನಗಾದ ಕಹಿ ಅನುಭವವನ್ನು ಸಂತ್ರಸ್ತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ತನ್ನ ಮುಖದಲ್ಲಿ ರಕ್ತ ಬರುತ್ತಿರುವ ಮತ್ತು ಪೈಲಟ್‌ನ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ.

ADVERTISEMENT

‘ದೆಹಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಇಂತಹ ನಡವಳಿಕೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ಸಂಬಂಧಪಟ್ಟ ಉದ್ಯೋಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದೂ ವಿಮಾನಯಾನ ಸಂಸ್ಥೆ ಹೇಳಿದೆ.

‘ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್‌ ವೀರೇಂದ್ರ ಸೆಜ್ವಾಲ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಏಳು ವರ್ಷದ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ’ ಎಂದು ಪ್ರಯಾಣಿಕ ಅಂಕಿತ್ ದಿವಾನ್ ಹೇಳಿಕೊಂಡಿದ್ದಾರೆ.

ಆಗಿದ್ದೇನು?

‘ನಾವು ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ನಿಂತಿದ್ದೆವು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಸಿಬ್ಬಂದಿ ಬಳಸುವ ಭದ್ರತಾ ತಪಾಸಣೆ ನಿಯಮಗಳನ್ನು ಅನುಸರಿಸುವಂತೆ ನಮಗೆ ಮಾರ್ಗದರ್ಶನ ನೀಡಿದ್ದರು. ವಿಮಾನ ನಿಲ್ದಾಣದ ಸಿಬ್ಬಂದಿ ನಮ್ಮ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಇದೇ ವೇಳೆ ವೀರೇಂದ್ರ ಅವರು ನನ್ನನ್ನು ‘ಅಶಿಕ್ಷಿತ’ ಎಂದು ನಿಂದಿಸಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪೈಲಟ್ ತನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ದಿವಾನ್ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.