ವಿಮಾನ ಪತನಕ್ಕೂ ಮುನ್ನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಡಾ. ಪ್ರತೀಕ್ ಜೋಶಿ ಕುಟುಂಬ
ಕೃಪೆ: X
ಬೆಳಗಾವಿ: ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟ ಡಾ. ಪ್ರತೀಕ್ ಜೋಶಿ ಅವರು ಕಠಿಣ ಪರಿಶ್ರಮದಿಂದ ಓದುತ್ತಿದ್ದ ಹಾಗೂ ಸ್ನೇಹಪರ ವಿದ್ಯಾರ್ಥಿಯಾಗಿದ್ದರು ಎಂದು ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕಾಹೇರ್) ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು (ಜೆಎನ್ಎಂಸಿ) ಸಿಬ್ಬಂದಿ ಸ್ಮರಿಸಿದ್ದಾರೆ.
ರಾಜಸ್ಥಾನದ ಉದಯಪುರ ನಿವಾಸಿಯಾಗಿರುವ ಜೋಶಿ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಗುರುವಾರ (ಜೂನ್ 12ರಂದು) ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡ ವಿಮಾನದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಾವಿಗೀಡಾದರು.
2000–2005ರ ಬ್ಯಾಚ್‌ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಜೋಶಿ, ನಂತರ ಕೋಲಾರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಿಂದ ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2021ರಲ್ಲಿ ಲಂಡನ್‌ಗೆ ತೆರಳಿದ್ದ ಅವರು, ತಮ್ಮ ಕುಟುಂಬವನ್ನೂ ಅಲ್ಲಿಗೇ ಕರೆದೊಯ್ಯಲು ಬಯಸಿದ್ದರು.
ಜೋಶಿ ಅವರೊಂದಿಗೆ ಅವರ ಪತ್ನಿ ಡಾ. ಕಾಮಿನಿ ಜೋಶಿ, ಮಗಳು ಮಿರಾಯ (8) ಹಾಗೂ 5 ವರ್ಷದ ಅವಳಿ ಮಕ್ಕಳಾದ ನಕುಲ್, ಪ್ರದ್ಯುತ್ ಕೂಡ ಗುರುವಾರ ಲಂಡನ್‌ಗೆ ಹೊರಟಿದ್ದ ವಿಮಾನವನ್ನು ಏರಿದ್ದರು. ಬಳಿಕ ಅವರೆಲ್ಲರೂ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿಯನ್ನು ಸಂಬಂಧಿಕರಿಗೆ ಕಳುಹಿಸಿ ಸಂಭ್ರಮಿಸಿದ್ದರು.
ಆ ಚಿತ್ರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಲಂಡನ್‌ಗೆ ತೆರಳುವ ಸಂಭ್ರಮದಲ್ಲಿದ್ದ ಜೋಶಿ ಹಾಗೂ ಅವರ ಕುಟುಂಬದವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ದುರದೃಷ್ಟಕರ ಎಂದು ಜೆಎನ್ಎಂಸಿ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ ಅವರು ಹೇಳಿದ್ದಾರೆ.
ಜೋಶಿ ಅವರು ತಮ್ಮ ಕುಟುಂಬವನ್ನು ಲಂಡನ್‌ಗೆ ಕರೆದೊಯ್ಯುವ ಸಲುವಾಗಿ ಇತ್ತೀಚೆಗೆ ಉದಯಪುರಕ್ಕೆ ಬಂದಿದ್ದರು. ಹಾಗಾಗಿಯೇ, ಅವರ ಪತ್ನಿ ಡಾ. ಕಾಮಿನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.