ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಪತನಗೊಂಡಿರುವ ಏರ್ ಇಂಡಿಯಾ ವಿಮಾಣ
ರಾಯಿಟರ್ಸ್ ಚಿತ್ರ
ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲಾಕ್ ಬಾಕ್ಸ್ ಅನ್ನು ವಿಶ್ಲೇಷಣೆ ಸಲುವಾಗಿ ಅಮೆರಿಕಕ್ಕೆ ಕಳುಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ 'Economic Times' ವರದಿ ಮಾಡಿದೆ.
'ದುರಂತದ ವೇಳೆ ಬೆಂಕಿಯಿಂದಾಗಿ ಕಪ್ಪು ಪೆಟ್ಟಿಗೆಗೆ ಭಾರಿ ಹಾನಿಯಾಗಿದೆ. ಹಾಗಾಗಿ, ಅದರಲ್ಲಿನ ದತ್ತಾಂಶಗಳನ್ನು ತೆಗೆಯಲು ಸಾಧ್ಯವಾಗಿಲ್ಲ' ಎಂದು ಮೂಲಗಳು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಪ್ಪುಪೆಟ್ಟಿಗೆಯಲ್ಲಿನ ದತ್ತಾಂಶಗಳನ್ನು ವಾಷಿಂಗ್ಟನ್ ಮೂಲದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಪ್ರಯೋಗಾಲಯದಲ್ಲಿ ವಿಶ್ಲೇಷಿಸಲಾಗುತ್ತದೆ. ಬಳಿಕ, ಭಾರತದ 'ವಿಮಾನ ಅಪಘಾತ ತನಿಖಾ ಸಂಸ್ಥೆ'ಯೊಂದಿಗೆ (ಎಎಐಬಿ) ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎನ್ನಲಾಗಿದೆ.
ಎಎಐಬಿ ಸದ್ಯಕ್ಕೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಇಂಡಿಯಾ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಪೈಲಟ್ ಸಂಭಾಷಣೆ, ವಿಮಾನ ಹಾಗೂ ಗಾಳಿಯ ವೇಗ, ತಾಂತ್ರಿಕ ವಿವರಗಳು ಸೇರಿದಂತೆ ವಿಮಾನ ಪತನಕ್ಕೇನು ಕಾರಣ ಎಂಬುದನ್ನು ತಿಳಿಯಲು ನೆರವಾಗುವ ಮಾಹಿತಿಗಳು ಕಪ್ಪುಪೆಟ್ಟಿಗೆಯಲ್ಲಿ ದಾಖಲಾಗಿರುತ್ತವೆ.
ಏರ್ ಇಂಡಿಯಾದ ಡ್ರೀಮ್‌ಲೈನರ್ AI–171 ವಿಮಾನವು ಜೂನ್ 12ರ ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ಪೈಲಟ್‌ಗಳು, ಸಿಬ್ಬಂದಿ, ಪ್ರಯಾಣಿಕರು ಸೇರಿದಂತೆ ಒಟ್ಟು 242 ಮಂದಿ ವಿಮಾನದಲ್ಲಿದ್ದರು. ಸುಮಾರು 800 ಅಡಿ ಎತ್ತರ ಹಾರಿದ್ದ ವಿಮಾನ, ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಬೀಳುತ್ತಿದ್ದಂತೆ ಭಾರಿ ಬೆಂಕಿ ಹೊತ್ತಿಕೊಂಡಿತ್ತು.
ಈ ದುರಂತದಿಂದಾಗಿ, ವಿಮಾನದಲ್ಲಿದ್ದ 241 ಮಂದಿ ಹಾಗೂ ಹಾಸ್ಟೆಲ್‌ನಲ್ಲಿದ್ದ ಕನಿಷ್ಠ 30 ವಿದ್ಯಾರ್ಥಿಗಳು ಮೃತಪಟ್ಟಿದ್ದರು.
ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತಗಳಲ್ಲಿ ಒಂದೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.