ADVERTISEMENT

ಬೋಯಿಂಗ್ ನಿರ್ದೇಶನದಂತೆ AI171 ವಿಮಾನದಲ್ಲಿ ಕಾಕ್‌ಪಿಟ್‌ ಬದಲಿಸಿದ್ದ ಏರ್‌ಇಂಡಿಯಾ

ಪಿಟಿಐ
Published 14 ಜುಲೈ 2025, 7:15 IST
Last Updated 14 ಜುಲೈ 2025, 7:15 IST
<div class="paragraphs"><p>ಏರ್‌ ಇಂಡಿಯಾ AI171 ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ ದೃಶ್ಯ; ಕಾಕ್‌ಪಿಟ್‌ನಲ್ಲಿ ಇಂಧನ ಪೂರೈಕೆ ನಿಯಂತ್ರಿಸುವ ಗುಂಡಿ</p></div>

ಏರ್‌ ಇಂಡಿಯಾ AI171 ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ ದೃಶ್ಯ; ಕಾಕ್‌ಪಿಟ್‌ನಲ್ಲಿ ಇಂಧನ ಪೂರೈಕೆ ನಿಯಂತ್ರಿಸುವ ಗುಂಡಿ

   

ನವದೆಹಲಿ: ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ 2019ರಲ್ಲಿ ನೀಡಿದ ನಿರ್ದೇಶನದಂತೆ ಏರ್‌ ಇಂಡಿಯಾ ಕಂಪನಿಯು ತನ್ನ ಬಳಿ ಇದ್ದ 787–8 ಡ್ರೀಮ್‌ಲೈನರ್‌ ವಿಮಾನಗಳಲ್ಲಿ (ದುರಂತಕ್ಕೀಡಾದ AI171 ಒಳಗೊಂಡು) ಕಾಕ್‌ಪಿಟ್‌ನಲ್ಲಿನ ಥ್ರಾಟೆಲ್‌ ಕಂಟ್ರೋಲ್‌ ಮಾಡ್ಯೂಲ್ (TCM) ಬದಲಿಸಿತ್ತು.

ಈ ಮಾಡ್ಯೂಲ್‌ನಲ್ಲಿ ಇಂಧನ ನಿಯಂತ್ರಿಸುವ ಗುಂಡಿಗಳು ಒಳಗೊಂಡಿದ್ದವು. ಅಹಮದಾಬಾದ್‌ ಬಳಿ ಜೂನ್ 12ರಂದು ಅಪಘಾತಕ್ಕೀಡಾಗಿ 260 ಜನರ ಸಾವಿಗೆ ಕಾರಣವಾದ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತಗೊಳಿಸಿದ್ದೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.

ADVERTISEMENT

2019ರಿಂದ 2023ರವರೆಗೆ TCM ಅನ್ನು ಎರಡು ಬಾರಿ ಬದಲಿಸಲಾಗಿದೆ ಎಂದು ವಿಮಾನ ಅಪಘಾತ ತನಿಖಾ ಸಂಸ್ಥೆಯು (AAIB) ಶನಿವಾರ ಬಿಡುಗಡೆ ಮಾಡಿದ ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ. ಆದರೆ ಈ ಬದಲಾವಣೆಯನ್ನು ಇಂಧನ ನಿಯಂತ್ರಣ ಗುಂಡಿಗಳಿಗೆ ಜೋಡಿಸುವಂತಿಲ್ಲ ಎಂದೂ ಈ ವರದಿ ಹೇಳಿದೆ.

2019ರಲ್ಲಿ ಡ್ರೀಮ್‌ಲೈನರ್‌ ಮಾದರಿಯ ವಿಮಾನಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣೆಯನ್ನು ಬೋಯಿಂಗ್ ಕಂಪನಿಯು ತನ್ನೆಲ್ಲಾ ಗ್ರಾಹಕರಿಗೆ ತಿಳಿಸಿತ್ತು. ಇದರಲ್ಲಿ ಪ್ರತಿ 24 ಸಾವಿರ ಗಂಟೆಗಳ ಹಾರಾಟದ ನಂತರ ಇಂಧನ ನಿಯಂತ್ರಣ ಗುಂಡಿಗಳ ಸಹಿತ ಕಾಕ್‌ಪಿಟ್‌ನಲ್ಲಿ ಪ್ರಮುಖ ಟಿಎಂಸಿ ಬದಲಾವಣೆ ಮಾಡುವಂತೆ ಕಂಪನಿ ಸೂಚಿಸಿತ್ತು. ಇದರನ್ವಯ ಏರ್‌ಇಂಡಿಯಾ ಕಂಪನಿಯು 2019ರಿಂದ 2023ರಲ್ಲಿ ತನ್ನ ಎಲ್ಲಾ ಡ್ರೀಮ್‌ಲೈನರ್ ಮಾದರಿಯ ವಿಮಾನಗಳಲ್ಲಿ ಎರಡು ಬಾರಿ ಈ ಸಾಧನಗಳನ್ನು ಬದಲಿಸಿದೆ ಎಂದು ಹೇಳಲಾಗಿದೆ.

‘ಈ ಅಪಘಾತದ ನಂತರ ಸಂಸ್ಥೆಯು ತನ್ನೆಲ್ಲಾ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಜತೆಗೆ ತನಿಖಾ ಸಂಸ್ಥೆಗೂ ಅಗತ್ಯ ಸಹಕಾರವನ್ನು ನೀಡಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಾಗುತ್ತಿಲ್ಲ. ಆದರೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ’ ಎಂದು ಏರ್‌ ಇಂಡಿಯಾ ಹೇಳಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.