ವಿಮಾನ
ನವದೆಹಲಿ: ಈ ವರ್ಷದ ಆರಂಭದಿಂದ ಜುಲೈ21ರವರೆಗೆ ಐದು ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ 183 ತಾಂತ್ರಿಕ ದೋಷವನ್ನು ವಾಯುಯಾನ ನಿಯಂತ್ರಕ ಡಿಜಿಸಿಎಗೆ ವರದಿ ಮಾಡಿದ್ದು, ಅದರಲ್ಲಿ 85 ದೋಷಗಳು ಏರ್ ಇಂಡಿಯಾ ವಿಮಾನಗಳಿಂದಲೇ ವರದಿಯಾಗಿವೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.
ಈ ಕುರಿತು ಲಿಖಿತ ರೂಪದಲ್ಲಿ ಉತ್ತರ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ‘ಇಂಡಿಗೊ 62, ಆಕಾಸಾ ಏರ್‌ಲೈನ್ಸ್ 68 ತಾಂತ್ರಿಕ ದೋಷಗಳನ್ನು ವರದಿ ಮಾಡಿದೆ ಎಂದು ತಿಳಿಸಿದೆ.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಒಟ್ಟಾಗಿ ಕ್ರಮವಾಗಿ 85 ತಾಂತ್ರಿಕ ದೋಷಗಳನ್ನು ವರದಿ ಮಾಡಿದೆ. ಈ ಎಲ್ಲಾ ಅಂಕಿ ಅಂಶಗಳು ಜನವರಿಯಿಂದ ಜುಲೈ 21ರವರೆಗಿನದು ಎಂದು ಸಚಿವಾಲಯ ಹೇಳಿದೆ.
2024ರಲ್ಲಿ 421 ತಾಂತ್ರಿಕ ದೋಷಗಳು ವರದಿಯಾಗಿದ್ದು, 2023ರಲ್ಲಿ 448, 2022ರಲ್ಲಿ 528 ತಾಂತ್ರಿಕ ದೋಷಗಳು ವರದಿಯಾಗಿದ್ದವು. ಈ ಮೂರು ವರ್ಷದ ಅಂಕಿ ಅಂಶದಲ್ಲಿ ಅಲಯಾನ್ಸ್ ಏರ್ ಮತ್ತು ಹಿಂದಿನ ವಿಸ್ತಾರಾದ ವರದಿಗಳೂ ಸೇರಿವೆ. 2021ರಲ್ಲಿ 514 ತಾಂತ್ರಿಕ ದೋಷಗಳು ವರದಿಯಾಗಿದ್ದವು, ಆ ಸಮಯದಲ್ಲಿ ಆಕಾಸ ಏರ್‌ಲೈನ್ಸ್ ಆರಂಭವಾಗಿರಲಿಲ್ಲ ಎಂದು ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದೆ.
ಎಲ್ಲಾ ದೋಷಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ಗೆ ವರದಿ ಮಾಡಲಾಗಿದ್ದು, ಸೂಕ್ತ ತಿದ್ದುಪಡಿ ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕಾಗಿದೆ.
ಎಲ್ಲಾ ತಾಂತ್ರಿಕ ದೋಷಗಳ ತನಿಖೆ, ಮುಖ್ಯವಾಗಿ ಪ್ರಮುಖ ದೋಷಗಳ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಮುರಳಿಧರ ಮೋಹಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.