
ಬಾರಾಮತಿ ಪಟ್ಟಣದ ನೋಟ ಹಾಗೂ ಒಳಚಿತ್ರದಲ್ಲಿ ಅಜಿತ್ ಪವಾರ್
ಮುಂಬೈ: ಒಂದು ಕಾಲದಲ್ಲಿ ಬರಪೀಡಿತ ಪ್ರದೇಶವಾಗಿದ್ದ ಪುಣೆಯ ಬಾರಾಮತಿಯಲ್ಲಿ, ಕೃಷಿ, ತೋಟಗಾರಿಕೆ ಚಟುವಟಿಕೆಗಳು ವಿಫುಲವಾಗಿವೆ. ಹೈನು, ಸಹಕಾರ ಸಂಸ್ಥೆಗಳು, ಕೈಗಾರಿಕೆಗಳು ಬಂದಿದ್ದು, ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಗಳೂ ಆಗಿವೆ.
ಪುಣೆಯಿಂದ ಸುಮಾರು 100 ಕಿ.ಮೀ ಹಾಗೂ ಮುಂಬೈನಿಂದ 250 ಕಿ.ಮೀ. ದೂರದಲ್ಲಿರುವ ಈ ಪಟ್ಟಣದಲ್ಲಿ 'ಪವಾರ್' ಕುಟುಂಬದ ಪ್ರಾಬಲ್ಯವಿದೆ.
ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ, ಮೂರು ಸಲ ಕೇಂದ್ರದ ಸಚಿವರಾಗಿದ್ದ ಶರದ್ ಪವಾರ್ ಅವರು, ಬಾರಾಮತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರೆ, ಕಳೆದ ನಾಲ್ಕು ದಶಕಗಳಿಂದ ಅದನ್ನು ಮುಂದುವರಿಸಿಕೊಂಡು ಬಂದವರು ಅವರ ಸಂಬಂಧಿ ಅಜಿತ್ ಪವಾರ್.
ಈ ಪಟ್ಟಣವನ್ನು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ನಮೂನೆಯಾಗಿ 'ಬಾರಾಮತಿ ಮಾದರಿ' ಎಂದು ಕರೆಯಲಾಗುತ್ತಿದೆಯಾದರೂ, ಇದನ್ನು ಜಾಗತಿಕ ಭೂಪಟದಲ್ಲಿ ನೋಡುವ ಕನಸನ್ನು ಅಜಿತ್ ಪವಾರ್ ಅವರು ಕಂಡಿದ್ದರು.
ಶರದ್ ಅವರಿಗೆ 'ಸಾಹೇಬ್' ಎಂದೂ, ಅಜಿತ್ ಅವರಿಗೆ 'ದಾದಾ' ಎಂತಲೂ ಖ್ಯಾತಿ ಬಂದದ್ದು ಬಾರಾಮತಿಯಿಂದಲೇ.
ಅಪಘಾತವಾದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕನಸು
ಚುನಾವಣಾ ಪ್ರಚಾರದ ಸಲುವಾಗಿ ಪ್ರಯಾಣ ಆರಂಭಿಸಿದ್ದ ಅಜಿತ್ ಪವಾರ್ ಅವರು, ಬಾರಾಮತಿಯಲ್ಲಿ ವಿಮಾನ ಲ್ಯಾಂಡ್ ಆಗುವಾಗ ಸಂಭವಿಸಿದ ಅಪಘಾತದಲ್ಲಿ (ಜನವರಿ 28ರಂದು) ಮೃತಪಟ್ಟಿದ್ದಾರೆ. ಆದರೆ, ಆ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಅಜಿತ್ ಅವರ ಬಯಕೆಯಾಗಿತ್ತು.
'ಬಾರಮತಿಯನ್ನು ನೋಡಲು ಭಾರತದಿಂದ ಮಾತ್ರವಲ್ಲ, ವಿದೇಶಗಳಿಂದಲೂ ಜನರು ತಾವಾಗಿಯೇ ಬರುವಂತಾಗಬೇಕು ಎಂಬುದು ನಮ್ಮ ಬಯಕೆ' ಎಂದು 2024ರ ಲೋಕಸಭೆ ಹಾಗೂ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಹೇಳಿದ್ದರು.
'ಕಟುಮಾತಿನ ಹೃದಯವಂತ'
'ರಾಜ್ಯದಾದ್ಯಂತ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಅಜಿತ್ ವಾರದಲ್ಲಿ ಒಮ್ಮೆಯಾದರೂ ಬಾರಾಮತಿಗೆ ಭೇಟಿ ನೀಡುತ್ತಿದ್ದರು. ಅಲ್ಲಿನ ಪ್ರತಿಯೊಂದು ಕೆಲಸ ಕಾರ್ಯಗಳನ್ನೂ ನಿರಂತರವಾಗಿ ಪರಿಶೀಲಿಸುತ್ತಿದ್ದರು. ಶರದ್ 'ಸಾಹೇಬ್' ತೋಟದಲ್ಲಿ ಬೀಜ ಬಿತ್ತಿದ್ದರು. ಅಜಿತ್ 'ದಾದಾ' ಮಾಲಿಯಂತೆ ಕೆಲಸ ಮಾಡುತ್ತಾ, ಬಾರಾಮತಿಯ ಪೋಷಣೆ ಮಾಡುತ್ತಿದ್ದರು' ಎಂದು ಬಾರಾಮತಿ ಪುರಸಭೆ ಅಧ್ಯಕ್ಷ ಸಚಿನ್ ಸತವ್ ಹೇಳಿದ್ದಾರೆ.
ಸತವ್ ಅವರು ಅಜಿತ್ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಸತವ್ ಅತರ ತಾತ ಧೊಂಡಿಬಾ ಸತವ್, ತಂದೆ ಸದಾಶಿವ ಸತವ್ ಹಾಗೂ ತಾಯಿ ಜಯಶ್ರೀ ಸತವ್ ಅವರೂ ಬಾರಾಮತಿ ಪುರಸಭೆ ಅಧ್ಯಕ್ಷರಾಗಿದ್ದರು.
'ಅಜಿತ್ ದಾದಾ ದೊಡ್ಡ ದೊಡ್ಡ ಯೋಜನೆಗಳನ್ನು ಹೊಂದಿದ್ದರು. ಅವರ ಸಹಚರರ ಮೂಲಕವೂ ಬಾರಮತಿಯಲ್ಲಿ ಆಗುವ ಎಲ್ಲ ಕಾರ್ಯಗಳ ಪರಿಶೀಲನೆ ನಡೆಸುತ್ತಿದ್ದರು. ಹೇಳಿದ ಸಮಯಕ್ಕೆ ಕೆಲಸ ಆಗಬೇಕು ಎಂಬ ಮಾತಿಗೆ ಬದ್ಧವಾಗಿರುತ್ತಿದ್ದರು. ಮಾತಿನಲ್ಲಿ ತುಂಬಾ ಕಟುವಾಗಿ ಕಂಡರೂ, ಮೃದು ಮನಸ್ಸಿನವರಾಗಿದ್ದರು' ಎಂದು ಎನ್‌ಸಿಪಿ ಹಾಗೂ ಎನ್‌ಸಿಪಿ (ಎಸ್‌ಪಿ) ಪಕ್ಷಗಳಿಗೆ ಸೇರಿದ, 'ಪವಾರ್' ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ.
ಪ್ರಮುಖ ಕಂಪನಿಗಳು ಬಾರಾಮತಿಯಲ್ಲಿ..
ಬಾರಾಮತಿಯಲ್ಲಿರುವ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮವು (MIDC) ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ.
'ಪಿಯಾಜಿಯೊ, ಫೆರೆರೊ, ಡೈನಾಮಿಕ್ಸ್ ಡೈರಿ, ಕಲ್ಯಾಣಿ ಸ್ಟೀಲ್ಸ್, ಭಾರತ್ ಫೋರ್ಜ್, ಗಾಡ್‌ಫ್ರೇ ಫಿಲಿಪ್ಸ್, ಎಸ್‌ಎಂಟಿ ಲಿಮಿಟೆಡ್, ಇಮ್ಸೋಫೆರ್, ಸೆನ್ವಿಯಾನ್, ಶ್ಚೆರೀಬರ್ ಡೈನಾಮಿಕ್ಸ್ ಡೈರೀಸ್ ಲಿಮಿಟೆಡ್‌ನಂತಹ ಪ್ರಮುಖ ಕಂಪನಿಗಳು ಬಾರಾಮತಿಯಲ್ಲಿವೆ. MIDC ಪ್ರದೇಶವು ಉತ್ತಮ ಮೂಲಸೌಕರ್ಯ ವ್ಯವಸ್ಥೆಗಳನ್ನು ಹೊಂದಿದೆ. ಬಾರಾಮತಿಯ ರೈತರು, ಪ್ರಮುಖ ಬೆಳೆಗಳಾಗಿ ಕಬ್ಬು, ದ್ರಾಕ್ಷಿ, ಜೋಳ, ಹತ್ತಿ ಮತ್ತು ಗೋಧಿಯನ್ನು ಬೆಳೆಯುತ್ತಾರೆ. ಇಲ್ಲಿನ ಸಕ್ಕರೆ ಕಾರ್ಖಾನೆಗಳು ಅತ್ಯುತ್ತಮವಾದವುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ' ಎಂದು ಬಾರಾಮತಿ ಮೂಲದ ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.
ಬಾರಾಮತಿ ಹೈ-ಟೆಕ್ ಟೆಕ್ಸ್‌ಟೈಲ್ ಪಾರ್ಕ್ ಲಿಮಿಟೆಡ್ ಕೂಡ ಬಾರಾಮತಿ MIDC ಪ್ರದೇಶದಲ್ಲಿ ನೆಲೆಗೊಂಡಿದೆ. ಸುಮಾರು 60 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿರುವ ಇದು, ದೇಶೀಯ ಉಡುಪು ತಯಾರಿಕೆಯ ಪ್ರಮುಖ ಕೇಂದ್ರವಾಗಿದೆ.
ಗ್ರಾಮೀಣ ಜನಜೀವನ ಸುಧಾರಣೆ
'ಸುಸ್ಥಿರ ಕೃಷಿ, ಗುಣಮಟ್ಟದ ಶಿಕ್ಷಣ ಮತ್ತು ಸಮುದಾಯ ಸಬಲೀಕರಣವು ಬಾರಾಮತಿ ಗ್ರಾಮೀಣ ಭಾಗದ ಜನಜೀವನ ಸುಧಾರಣೆಗೊಳ್ಳುವಂತೆ ಮಾಡುತ್ತಿವೆ. ಜಲ ಸಂರಕ್ಷಣೆ, ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ, ಮಹಿಳಾ ಸಬಲೀಕರಣ ಸೇರಿದಂತೆ ಬಾರಾಮತಿಯು ಸಮಗ್ರ ಗ್ರಾಮೀಣ ಅಭಿವೃದ್ಧಿಯ ಮಾದರಿಯಾಗಿದೆ. ನಾವೀನ್ಯತೆ, ತಂತ್ರಜ್ಞಾನ ಮತ್ತು ಜಾಗತಿಕ ಸಹಯೋಗದೊಂದಿಗೆ ಕೃಷಿ-ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಒತ್ತು ನೀಡಲಾಗುತ್ತಿದೆ' ಎಂದು ಬಾರಾಮತಿಯ ಕೃಷಿ ಅಭಿವೃದ್ಧಿ ಟ್ರಸ್ಟ್ ತಿಳಿಸಿದೆ.
'ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ಬಾರಾಮತಿ ಕೈಗಾರಿಕೆಗಳ ಸಮೃದ್ಧಿಗಾಗಿ ದೂರದೃಷ್ಟಿಯನ್ನು ನಮ್ಮ ಯೋಜನೆಗಳ ಹಿಂದೆ ಇದೆ' ಎಂದು ಬಾರಾಮತಿ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (BIDA) ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.