ADVERTISEMENT

ನಾಯಕತ್ವ ಬದಲಾವಣೆ ವಿಚಾರ: ಪತ್ರ ವಿವಾದದ ನಡುವೆ ಸೋನಿಯಾ–ರಾಹುಲ್ ಬೆಂಬಲಿಸಿದ ಪೈಲಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2020, 14:18 IST
Last Updated 24 ಆಗಸ್ಟ್ 2020, 14:18 IST
ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್
ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್   

ಜೈಪುರ: ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ‌ ನಾಯಕ ಸಚಿನ್‌ ಪೈಲಟ್ ಅವರು ಕಾಂಗ್ರೆಸ್‌ ನಾಯಕತ್ವ ಬದಲಾವಣೆ ವಿಚಾರವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್‌ನ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳೂ ಸೇರಿದಂತೆ23 ನಾಯಕರು ಪಕ್ಷದ ನಾಯಕತ್ವ ಬದಲಾವಣೆ ಕುರಿತು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಗಸ್ಟ್‌ 7 ರಂದು ಪತ್ರ ಬರೆದಿದ್ದರು.

ಪಕ್ಷದಲ್ಲಿಪ್ರತಿ ಹಂತದಲ್ಲಿಯೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಕ್ಷಕ್ಕೆ ಪೂರ್ಣಾವಧಿಯ ಸಾಮೂಹಿಕ ನಾಯಕತ್ವ ಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ನಾಯಕತ್ವದ ವಿಷಯದಲ್ಲಿ ಎದುರಾಗಿರುವ ‘ಅನಿಶ್ಚಿತತೆ’ಯು ಕಾರ್ಯಕರ್ತರನ್ನು ನಿರಾಶೆಗೊಳಿಸುತ್ತಿದೆ ಮತ್ತು ಪಕ್ಷವನ್ನು ದುರ್ಬಲಗೊಳಿಸುತ್ತಿದೆ ಎಂದೂ ಹೇಳಲಾಗಿದೆ. ಜೊತೆಗೆ, ಸ್ವಾತಂತ್ರ್ಯಾ ನಂತರ ಪ್ರಮುಖವಾಗಿ ಪಕ್ಷವನ್ನು ಮುನ್ನಡೆಸುತ್ತಿರುವ ನೆಹರೂ-ಗಾಂಧಿ ಕುಟುಂಬವು ಸಾಮೂಹಿಕ ನಾಯಕತ್ವದ ಭಾಗವಾಗಲಿ ಎಂದು ತಿಳಿಸಲಾಗಿದೆ. ಈ ಪತ್ರದ ಬಳಿಕ ನಾಯಕತ್ವ ಬದಲಾವಣೆ ಕುರಿತು ಪಕ್ಷದ ವಲಯದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ.

ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಪೈಲಟ್, ‘ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಜೀ ಅವರು ಜನರ ಒಳಿತಿಗಾಗಿ ಸಾಕಷ್ಟು ತ್ಯಾಗ ಮಾಡುವುದರ ಅರ್ಥವನ್ನು ತೋರಿಸಿಕೊಟ್ಟಿದ್ದಾರೆ. ಏಕತೆಯನ್ನು ಸಾಧಿಸುವ ಮತ್ತು ಪಕ್ಷವನ್ನು ಬಲಪಡಿಸುವ ಸಮಯ ಇದಾಗಿದೆ. ನಾವೆಲ್ಲರೂ ಒಂದಾದಾಗ ನಮ್ಮ ಭವಿಷ್ಯವೂ ಬಲಗೊಳ್ಳುತ್ತದೆ. ಕಾಂಗ್ರೆಸ್‌ನ ಹೆಚ್ಚಿನ ಕಾರ್ಯಕರ್ತರು ರಾಹುಲ್‌ ಜೀ ಅಧ್ಯಕ್ಷರಾಗುವುದನ್ನು ಮತ್ತು ಪಕ್ಷ ಮುನ್ನಡೆಸುವುದನ್ನು ನೋಡಲು ಬಯಸುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಇದಕ್ಕೂ ಮೊದಲ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೋನಿಯಾ ಮತ್ತು ರಾಹುಲ್‌ ಅವರನ್ನು ಬೆಂಬಲಿಸಿದ್ದರು.

‘ಸೋನಿಯಾ ಗಾಂಧಿ ಅವರು ಬಯಸಿದಷ್ಟು ಕಾಲ ಮುಂದುವರಿಯಬೇಕು; ರಾಹುಲ್ ಗಾಂಧಿ ಅವರು ಸಂಪೂರ್ಣ ಸಮರ್ಥರಾಗಿರುವುದರಿಂದ ಸೋನಿಯಾ ಅವರ ನಂತರ ಅಧಿಕಾರ ವಹಿಸಿಕೊಳ್ಳಬೇಕು’ ಎಂದು ಅಮರಿಂದರ್ ಸಿಂಗ್ ಅವರು ಹೇಳಿದ್ದರು.

ಸಿದ್ದರಾಮಯ್ಯ ಅವರು, 'ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಸತ್ತೆಯನ್ನೇ ನಾಶ ಮಾಡಲು ಹೊರಟಿರುವ ಸಂದರ್ಭದಲ್ಲಿ, ನಾವು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು‌ ಪ್ರಯತ್ನಿಸಬೇಕು ಮತ್ತು ದುರ್ಬಲಗೊಳಿಸುವುದಲ್ಲ' ಎಂದು ಟ್ವೀಟ್‌ ಮಾಡಿದ್ದರು.

ನಾಯಕರ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಸೊನಿಯಾ,ನೆಹರೂ–ಗಾಂಧಿ ಕುಟುಂಬದವರ ಬದಲು ಹೊರಗಿನವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಹೇಳಿದ್ದರು.ಕಳೆದ ವರ್ಷ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ವೇಳೆ ರಾಹುಲ್‌ ಗಾಂಧಿ ಅವರೂ ಇದೇ ಮಾತನ್ನು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.