ಮಹುವಾ ಮೊಯಿತ್ರಾ
(ಪಿಟಿಐ ಚಿತ್ರ)
ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ನೀಡಿರುವ ಹೇಳಿಕೆಯು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
'ಬಾಂಗ್ಲಾದೇಶದಿಂದ ನುಸುಳುವಿಕೆಯನ್ನು ತಡೆಯುವಲ್ಲಿ ಅಮಿತ್ ಶಾ ವಿಫಲರಾಗಿದ್ದು, ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು' ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಹುವಾ ನೀಡಿದ್ದಾರೆ.
ಇದರ ಬೆನ್ನಲ್ಲೇ ಟಿಎಂಸಿ ನಾಯಕಿಯ ಹೇಳಿಕೆಯ ಸಂಬಂಧ ಬಿಜೆಪಿ ದೂರು ದಾಖಲಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೊಯಿತ್ರಾ, 'ಗಡಿಯ ಭದ್ರತೆಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ' ಎಂದು ಆರೋಪಿಸಿದ್ದಾರೆ.
'ಅವರು ಪದೇ ಪದೇ ನುಸುಳುಕೋರರ ಕುರಿತು ಮಾತನಾಡುತ್ತಾರೆ. ಆದರೆ ದೇಶದ ಗಡಿಯನ್ನು ಐದು ಪಡೆಗಳು ರಕ್ಷಿಸುತ್ತವೆ. ಅಲ್ಲದೆ ಇದು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಹೊಣೆಯಾಗಿದೆ' ಎಂದಿದ್ದಾರೆ.
'ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನುಸುಳುಕೋರರಿಂದಾಗಿ ಭೌಗೋಳಿಕ ಬದಲಾವಣೆ ಉಂಟಾಗುತ್ತಿದೆ ಎಂದು ಹೇಳಿದ್ದರು. ಆದರೆ ಪ್ರಧಾನಿ ಭಾಷಣ ಮಾಡುತ್ತಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದ ಗೃಹ ಸಚಿವರು, ನಗುತ್ತಾ ಚಪ್ಪಾಳೆ ತಟ್ಟುತ್ತಿದ್ದರು' ಎಂದು ಟೀಕಿಸಿದ್ದಾರೆ.
ಇದರ ಬೆನ್ನಲ್ಲೇ ಅಮಿತ್ ಶಾ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಮಹುವಾ, 'ನಮ್ಮ ಗಡಿಗಳನ್ನು ರಕ್ಷಿಸಲು ಯಾರೂ ಇಲ್ಲದಿದ್ದರೆ, ಬೇರೆ ದೇಶದ ಜನರು ದಿನವೂ ಒಳನುಸುಳುತ್ತಿದ್ದರೆ, ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ಕಣ್ಣಿಟ್ಟು ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ ಎಂದು ನಾಗರಿಕರು ದೂರು ನೀಡುತ್ತಿದ್ದರೆ, ಮೊದಲು ಅಮಿತ್ ಶಾ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು' ಎಂದು ಹೇಳಿದ್ದಾರೆ.
'ಗಡಿಯಲ್ಲಿ ಗಡಿ ಭದ್ರತಾ ಪಡೆಯ ಭದ್ರತೆ ಇದ್ದರೂ ನುಸುಳುವಿಕೆ ಏಕೆ ಮುಂದುವರಿದಿದೆ' ಎಂದು ಮಹುವಾ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.