ADVERTISEMENT

ಭಾಷಾ ಕೋಮುವಾದ ಬಿಜೆಪಿಗೆ ತಿರುಗುಬಾಣವಾಗಲಿದೆ: ಶಾ ಹೇಳಿಕೆಗೆ ಕೆಟಿಆರ್ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2022, 12:43 IST
Last Updated 9 ಏಪ್ರಿಲ್ 2022, 12:43 IST
ಕೆ.ಟಿ. ರಾಮರಾವ್ ಮತ್ತು ಅಮಿತ್ ಶಾ
ಕೆ.ಟಿ. ರಾಮರಾವ್ ಮತ್ತು ಅಮಿತ್ ಶಾ   

ಹೈದರಾಬಾದ್: ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೇ ಹೊರತು ಸ್ಥಳೀಯ ಭಾಷೆಗಳನ್ನಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ತೆಲಂಗಾಣ ನಗರಾಭಿವೃದ್ಧಿ ಮತ್ತು ಐಟಿ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ಹೇಳಿದ್ದಾರೆ.

‘ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ದೇಶೀಯ ಭಾಷೆಯಾದ ಹಿಂದಿಯನ್ನು ಬಳಸಬೇಕು. ವಿದೇಶಿ ಭಾಷೆಯನ್ನಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದರು.

ಈ ವಿಚಾರವಾಗಿ #stopHindiImposition ಎಂಬ ಟ್ಯಾಗ್‌ ಬಳಸಿ ಟ್ವೀಟ್ ಮಾಡಿರುವ ಕೆ.ಟಿ. ರಾಮರಾವ್, ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ದೇಶದ ಯುವ ಜನರ ಮೇಲೆ ಹಿಂದಿಯನ್ನು ಹೇರುವುದು ದೊಡ್ಡ ಅಪಚಾರ. ನಮ್ಮದು ವಿವಿಧತೆಯಲ್ಲಿ ಏಕತೆ ಸಾರಿದ ದೇಶವಾಗಿದ್ದು, ಒಕ್ಕೂಟ ವ್ಯವಸ್ಥೆಯನ್ನು ಒಳಗೊಂಡಿದೆ. ಜನರು ಏನು ತಿನ್ನಬೇಕು, ಏನು ಧರಿಸಬೇಕು, ಯಾವ ಭಾಷೆಯಲ್ಲಿ ಮಾತನಾಡಬೇಕು ಎಂಬ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

‘ನಾನು ಮೊದಲು ಭಾರತೀಯ, ಆಮೇಲೆ ಹೆಮ್ಮೆಯ ತೆಲುಗು ಮತ್ತು ತೆಲಂಗಾಣದವರು. ನನ್ನ ಮಾತೃಭಾಷೆ ತೆಲುಗು, ಇಂಗ್ಲಿಷ್, ಹಿಂದಿ ಮತ್ತು ಸ್ವಲ್ಪ ಉರ್ದುವಿನಲ್ಲಿಯೂ ಮಾತನಾಡಬಲ್ಲೆ. ದೇಶದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಹೇರುವುದು ದೊಡ್ಡ ಅಪಚಾರವಾಗಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.