ADVERTISEMENT

ಉ.ಪ್ರ | ಹಿಂದುತ್ವ ಸಂಘಟನೆಗಳ ಬೆದರಿಕೆ: ಅಂತರ್ ಧರ್ಮೀಯ ಜೋಡಿಯ ಆರತಕ್ಷತೆ ರದ್ದು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 9:39 IST
Last Updated 16 ಡಿಸೆಂಬರ್ 2024, 9:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪ್ರಾತಿನಿಧಿಕ ಚಿತ್ರ

ಅಲಿಗಢ: ಬಲಪಂಥೀಯ ಸಂಘಟನೆಗಳ ಬೆದರಿಕೆಯಿಂದಾಗಿ ಅಂತರ್ ಧರ್ಮೀಯ ವಿವಾಹವಾಗಿದ್ದ ಅಮೆರಿಕ ಮೂಲದ ಜೋಡಿಯೊಂದು ಆರತಕ್ಷತೆ ಕಾರ್ಯಕ್ರಮ ರದ್ದುಗೊಳಿಸಿದ ಘಟನೆ ಉತ್ತರದ ಪ್ರದೇಶದ ಅಲಿಗಢದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ADVERTISEMENT

ಮಾರ್ಚ್‌ನಲ್ಲಿ ವಿವಾಹವಾಗಿದ್ದ ಈ ಜೋಡಿಯು, ಅಮೆರಿಕದಲ್ಲಿರುವ ಭಾರತೀಯ ಕಾನ್ಸುಲೇಟ್‌ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿತ್ತು. ಅವರು ಶನಿವಾರ ಹೋಟೆಲ್ ಒಂದರಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಔತಣಕೂಟ ಏರ್ಪಡಿಸಿದ್ದರು.

ಆರತಕ್ಷತೆ ಕರೆಯೋಲೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬಜರಂಗ ದಳ, ಕರ್ಣಿ ಸೇನೆ ಹಾಗೂ ಕೆಲವು ಬಿಜೆಪಿ ನಾಯಕರಿಂದ ಭಾರಿ ವಿರೋಧ ಎದುರಾಗಿತ್ತು.

ಈ ಸಮಾರಂಭದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹಿಂದುತ್ವ ಸಂಘಟನೆಗಳು ಡಿ.12ರಂದು ಬೆದರಿಕೆ ಹಾಕಿದ್ದಲ್ಲದೇ, ಬುಕ್ಕಿಂಗ್ ರದ್ದುಗೊಳಿಸಬೇಕು ಎಂದು ಹೋಟೆಲ್ ಆಡಳಿತಕ್ಕೆ ಬೆದರಿಕೆ ಹಾಕಿದ್ದವು.

ಕಾರ್ಯಕ್ರಮದ ವಿರುದ್ಧ ಭಾರಿ ವಿರೋಧ ವ್ಯಕ್ತಪಡಿಸಿ ಈ ಗುಂಪುಗಳು ಜಿಲ್ಲಾ ಮ್ಯಾಜಿಸ್ಟ್ರೇಟ್‌ (ನಗರ) ಅಮಿತ್ ಕುಮಾರ್‌ ಅವರನ್ನು ಭೇಟಿಯಾಗಿದ್ದವು. ಅಲಿಗಢ ಮೇಯರ್‌ ಶಕುಂತಲಾ ಭಾರ್ತಿ ಅವರಿಗೂ ಮನವಿ ಸಲ್ಲಿಸಿದ್ದವು. ಅಲ್ಲದೆ ಒಂದು ವೇಳೆ ಕಾರ್ಯಕ್ರಮ ನಡೆದರೆ ಅಶಾಂತಿಗೆ ಕಾರಣವಾಗಬಹುದು ಎಂದು ಬೆದರಿಕೆ ಒಡ್ಡಿದ್ದವು.

ಇದೊಂದು ಶುದ್ದ ಲವ್ ಜಿಹಾದ್ ಘಟನೆಯಾಗಿದ್ದು, ಹೀಗಾಗಿ ಸಮಾರಂಭವನ್ನು ವಿರೋಧಿಸುವುದಾಗಿ ಸಂಘಟನೆಗಳು ಹೇಳಿದ್ದವು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಸಂಭಲ್ ಹಾಗೂ ಬಹರಿಚ್‌ನಲ್ಲಿ ಇತ್ತೀಚಿಗೆ ನಡೆದ ಘಟನೆಗಳನ್ನು ಉಲ್ಲೇಖಿಸಿ, ನಗರದಲ್ಲೂ ಅದೇ ಪರಿಸ್ಥಿತಿ ಎದುರಾಗಬಹುದು ಎಂದು ಹೆದರಿಸಿದ್ದವು.

ಈ ವಿಷಯದಲ್ಲಿ ಜಿಲ್ಲಾ ಆಡಳಿತದ ಸೂಚನೆ ಪಾಲಿಸುವುದಾಗಿ ಹೋಟೆಲ್ ಆಡಳಿತ ಹೇಳಿತ್ತು. ಇದೇ ವೇಳೆ ಡಿ. 13ರಂದು ಕುಟುಂಬಸ್ಥರೊಂದಿಗೆ ಜಿಲ್ಲಾಡಳಿತದ ಅಧಿಕಾರಿಗಳು ಮಾತುಕತೆ ನಡೆಸಿದರು. ಕೊನೆಗೆ ಉಭಯ ಕುಟುಂಬಸ್ಥರು ಕಾರ್ಯಕ್ರಮ ರದ್ದು ಮಾಡುವ ನಿರ್ಧಾರ ಕೈಗೊಂಡರು.

ದಂಪತಿ ವಿದ್ಯಾವಂತರೂ, ನುರಿತ ವೃತ್ತಿಪರರೂ, ಹೆಸರಾಂತ ಕುಟುಂಬದವರೂ ಆಗಿದ್ದಾರೆ. ಉಭಯ ಕುಟುಂಬದ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಖಾಸಗಿ ವಿಚಾರವಾಗಿರುವುದರಿಂದ, ದಂಪತಿ ತಮ್ಮ ಗುರುತನ್ನು ಗೋಪ್ಯವಾಗಿಡಲು ಬಯಸಿದ್ದು, ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.