ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯವಿಚಾರಿಸಿದ ನಾಯ್ಡು
ತಿರುಪತಿ(ಆಂಧ್ರ ಪ್ರದೇಶ): ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿದ್ದ ಸ್ಥಳಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿ ನೀಡಿದ್ದಾರೆ.
ತಿರುಪತಿಯ ಎಂಜಿಎಂ ಶಾಲೆ ಬಳಿಯ ಬೈರಾಗಿ ಪಟ್ಟೇಡ ಬಳಿ ಬುಧವಾರ ರಾತ್ರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್‌ಗಾಗಿ ನೂರಾರು ಭಕ್ತರು ಮುಗಿಬಿದ್ದು ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಆರು ಭಕ್ತರು ಸಾವುಗೀಡಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜನವರಿ 10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು.
ಮುಖ್ಯಮಂತ್ರಿ ಜೊತೆಗೆ ಹಲವು ಸಚಿವರು, ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಅಧಿಕಾರಿಗಳು ಮತ್ತು ಇತರರು ಈ ಸಂದರ್ಭ ಹಾಜರಿದ್ದರು. ಯಾತ್ರೆಗೆ ಆಗಮಿಸುವ ಜನಸಂದಣಿಯನ್ನು ನಿಭಾಯಿಸಲು ಮಾಡಲಾಗಿರುವ ತಾತ್ಕಾಲಿಕ ವ್ಯವಸ್ಥೆಗಳನ್ನು ಸಿಎಂ ಪರಿಶೀಲಿಸಿದರು.
ಕಾಲ್ತುಳಿತದ ಸ್ಥಳದಲ್ಲೇ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಿಎಂ ನಾಯ್ಡು, ಟಿಟಿಡಿಯ ಜಂಟಿ ಕಾರ್ಯಕಾರಿ ಅಧಿಕಾರಿ ಎಂ ಗೌತಮಿ ಬಳಿ ದುರ್ಘಟನೆಗೆ ಉತ್ತರ ಕೊಡುವಂತೆ ಆಗ್ರಹಿಸಿದರು.
ಬಳಿಕ ಅವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.