ADVERTISEMENT

ಆಂಧ್ರ ಪ್ರದೇಶ | ರೈಲು ನಿಲ್ದಾಣದಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ; ಮೂವರ ಬಂಧನ

ಪಿಟಿಐ
Published 1 ಮೇ 2022, 14:24 IST
Last Updated 1 ಮೇ 2022, 14:24 IST
   

ಅಮರಾವತಿ: ಬಾಲಕ ಸೇರಿದಂತೆ ಮೂವರು ಆರೋಪಿಗಳು ವ್ಯಕ್ತಿಯೊಬ್ಬರನ್ನು ಥಳಿಸಿ, ಅವರ ಗರ್ಭಿಣಿ ಪತ್ನಿಯ ಮೇಲೆ ಶನಿವಾರ ರಾತ್ರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.ಇಲ್ಲಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ರೇಪೆಲ್ಲೆ ಪಟ್ಟಣ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧಮೂವರನ್ನು ಬಂಧಿಸಲಾಗಿದೆ ಎಂದು ಬಪಟ್ಲಾ ಜಿಲ್ಲೆಯ ಎಸ್‌ಪಿ ವಕುಲ್‌ ಜಿಂದಾಲ್ ಭಾನುವಾರ ಹೇಳಿದ್ದಾರೆ.

ಪ್ರಕಾಸಂ ಜಿಲ್ಲೆಯ ವಲಸೆ ಕೃಷಿ ಕಾರ್ಮಿಕರಾಗಿರುವ ದಂಪತಿ, ಕೃಷ್ಣ ಜಿಲ್ಲೆಯ ನಾಗಯಲಂಕಕ್ಕೆ ತಲುಪುವ ಸಲುವಾಗಿಗುಂಟೂರಿನಿಂದ ಶನಿವಾರ ರಾತ್ರಿ 11.30ಕ್ಕೆ ರೇಪೆಲ್ಲೆ ಪಟ್ಟಣಕ್ಕೆ ಆಗಮಿಸಿದ್ದರು.

ADVERTISEMENT

ಅವರು ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಬಂದ ಮೂವರು, ವ್ಯಕ್ತಿಯನ್ನು ಎಬ್ಬಿಸಿ ಸಮಯ ಎಷ್ಟು ಎಂದು ಕೇಳಿದ್ದಾರೆ. ವಾಚ್‌ ಇಲ್ಲದ ಕಾರಣ ಆತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 'ಅದಾಗಲೇ ಅಮಲಿನಲ್ಲಿದ್ದ ಆರೋಪಿಗಳು, ವ್ಯಕ್ತಿಯನ್ನು ಥಳಿಸಿ ₹ 750 ಹಣವನ್ನು ಕಿತ್ತುಕೊಂಡಿದ್ದಾರೆ. ಬಳಿಕ ಗರ್ಭಿಣಿಯ ಮೇಲೂ ಹಲ್ಲೆ ನಡೆಸಿದ ಆರೋಪಿಗಳು, ಲೈಂಗಿಕ ದೌರ್ಜನ್ಯವೆಸಗಿದ್ದಾರೆ' ಎಂದುಜಿಂದಾಲ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

ಆ ವೇಳೆ ರೈಲು ನಿಲ್ದಾಣದಿಂದ ಓಡಿಹೋದ ಮಹಿಳೆಯ ಪತಿ, ಸ್ಥಳೀಯ ಪೊಲೀಸರ ನೆರವು ಕೋರಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಿಡಿಗೇಡಿಗಳು ಪರಾರಿಯಾಗಿದ್ದರು.ಸಂತ್ರಸ್ತೆಯನ್ನು ತಕ್ಷಣವೇ ಸಮಯದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

'ಪೊಲೀಸ್‌ಶ್ವಾನಗಳ ಸಹಾಯದಿಂದ ಆರೋಪಿಗಳನ್ನು ಬೆನ್ನತ್ತಲಾಯಿತು. ಕಿಡಿಗೇಡಿಯೊಬ್ಬ ಶರ್ಟ್‌ ಬಿಸಾಡಿದ್ದದ್ದು ಪತ್ತೆಯಾಯಿತು. ಈ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ಮುಂದುವರಿಸಲಾಯಿತು. ಇಂದು (ಭಾನುವಾರ) ಮಧ್ಯಾಹ್ನ ಮೂವರನ್ನೂ ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಾಗಿರುವ ಬಾಲಕ ಈಗಾಗಲೇ ಕಳ್ಳತನಕ್ಕೆ ಸಂಬಂಧಿಸಿದಮೂರು ಪ್ರಕರಣಗಳಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿದ್ದಾನೆ' ಎಂದು ವಿವರಿಸಿದ್ದಾರೆ.

ಮೂಲಗಳ ಪ್ರಕಾರ ಸಂತ್ರಸ್ತೆಯ ಪತಿ ಮೊದಲು ನೆರವಿಗಾಗಿ ಮನವಿ ಮಾಡಿದಾಗ ರೇಪೆಲ್ಲೆ ರೈಲ್ವೆ ಪೊಲೀಸ್ ಠಾಣೆಯವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವರು, ನೆರವು ಕೋರಿ ಪಟ್ಟಣ ಪೊಲೀಸ್‌ ಠಾಣೆಗೆ ಹೋಗುವಂತಾಗಿದೆ ಎನ್ನಲಾಗಿದೆ.

ಏತನ್ಮಧ್ಯೆ ಘಟನೆ ಕುರಿತು ಕಿಡಿಕಾರಿರುವ ಆಂಧ್ರ ಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ವಿ. ಪದ್ಮಾ, ವಿಸ್ತೃತ ವರದಿ ನೀಡುವಂತೆ ಆಗ್ರಹಿಸಿದ್ದಾರೆ. ವಿರೋಧ ಪಕ್ಷಗಳು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವುದನ್ನು ಈ ಪ್ರಕರಣ ಬಹಿರಂಗ ಪಡಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.