
ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಉಪಾಸನಾ ಜತೆ ವಾಗ್ವಾದ ನಡೆಸಿದ ಸಚಿವ ಅನಿಲ್ ವಿಜ್
ಎಕ್ಸ್ ಚಿತ್ರ
ಚಂಡೀಗಢ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಅಮಾನತು ವಿಷಯವಾಗಿ ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರದ ಸಚಿವ ಅನಿಲ್ ವಿಜ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಉಪಾಸನಾ ನಡುವೆ ಕಾವೇರಿದ ಚರ್ಚೆ ನಡೆದಿದೆ. ‘ತನ್ನ ಆದೇಶ ಪಾಲಿಸದಿದ್ದರೆ ಗೆಟ್‌ಔಟ್’ ಎಂದು ಸಚಿವರು ಹೇಳಿದ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಕೈತಾಲ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಬ್ ಇನ್‌ಸ್ಟೆಕ್ಟರ್ ಅಮಾನತು ವಿಷಯವಾಗಿ ಚರ್ಚೆ ನಡೆದಿದೆ. ಸಭೆಯಲ್ಲಿ ಪಾಲ್ಗೊಂಡು ಇಂಧನ, ಸಾರಿಗೆ ಮತ್ತು ಕಾರ್ಮಿಕ ಸಚಿವ ಅನಿಲ್ ವಿಜ್ ಅವರು ತಕ್ಷಣ ಅಮಾನತು ಮಾಡುವಂತೆ ನಿರ್ದೇಶಿಸಿದ್ದಾರೆ.
ಆದರೆ ಸಬ್ ಇನ್‌ಸ್ಟೆಕ್ಟರ್ ಅಮಾನತು ತನ್ನ ವ್ಯಾಪ್ತಿಯಲ್ಲಿಲ್ಲ. ಏಕೆಂದರೆ ಅಧಿಕಾರಿ ಕೆಲಸ ಮಾಡುತ್ತಿರುವುದು ಬೇರೊಂದು ಜಿಲ್ಲೆಯಲ್ಲಿ ಮತ್ತು ಅವರ ಮೇಲಧಿಕಾರಿ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂದಿದ್ದಾರೆ.
ಇದಕ್ಕೆ ತೃಪ್ತಿಯಾಗದ ಸಚಿವರು, ಉಪಾಸನಾ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ‘ನಾನು ಹೇಳುತ್ತಿದ್ದೇನೆ. ಆತನನ್ನು ಅಮಾನತು ಮಾಡಿ’ ಎಂದು ಗದರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಸನಾ, ‘ಈ ಕೆಲಸವನ್ನು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ಮಾಡಬೇಕು’ ಎಂದು ಸಮಜಾಯಿಷಿ ನೀಡಿದ್ದಾರೆ.
‘ಹಾಗಿದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಬರೆಯಿರಿ. ನಾನು ಹೇಳುತ್ತಿದ್ದೇನೆ ಅಮಾನತು ಮಾಡಿ. ನನ್ನ ಆದೇಶವನ್ನು ನೀವು ಪಾಲಿಸಲೇಬೇಕು’ ಎಂದು ಅನಿಲ್ ವಿಜ್ ಮತ್ತೆ ತಾಕೀತು ಮಾಡಿರುವ ವಿಡಿಯೊ ಹರಿದಾಡುತ್ತಿದೆ.
ಸಚಿವರಿಗೆ ವಾಸ್ತವ ಅರ್ಥ ಮಾಡಿಸಲು ಉಪಾಸನಾ ನಿರಂತರವಾಗಿ ಪ್ರಯತ್ನ ಮಾಡಿದ್ದಾರೆ.
ಇದರಿಂದ ತೀವ್ರವಾಗಿ ಕೋಪಗೊಂಡ ಸಚಿವರು, ‘ನಿಮಗೆ ಅಧಿಕಾರವೇ ಇಲ್ಲವೆಂದ ಮೇಲೆ ಸಭೆಯಿಂದ ಹೊರನಡೆಯಿರಿ’ ಎಂದು ಗದರಿರುವುದು ದಾಖಲಾಗಿದೆ.
ಉಪಾಸನಾ ಅವರು, ‘ನಾನು ಬರೆಯುತ್ತೇನೆ ಸರ್, ನಾನು ಬರೆಯಬಹುದು ಕೂಡಾ. ಆದರೆ ನಾನು ಅಮಾನತು ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ನಾನು ಹೇಳಿದ್ದೇನೆ. ನನ್ನ ಆದೇಶವನ್ನು ನೀನು ಪಾಲನೆ ಮಾಡಲೇಬೇಕು. ನಿನ್ನ ಆದೇಶವನ್ನು ಕೊಡಬೇಡ. ನಾನು ಹೇಳುವುದನ್ನು ಮಾಡು ಅಷ್ಟೇ. ಸಬ್ ಇನ್‌ಸ್ಟೆಪಕ್ಟರ್ ಅಮಾನತು ಮಾಡುವಂತೆ ನಾನು ಆದೇಶಿಸಿದ್ದೇನೆ ಎಂದು ಡಿಜಿಪಿಗೆ ಪತ್ರ ಬರೆ. ಯಾರು ನನ್ನ ಆದೇಶ ಪಾಲಿಸುವುದಿಲ್ಲ ಎಂಬುದನ್ನು ನೋಡುತ್ತೇನೆ’ ಎಂದು ಸಚಿವ ಅನಿಲ್ ವಿಜ್ ಎಚ್ಚರಿಕೆ ನೀಡಿದ್ದಾರೆ.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅನಿಲ್ ವಿಜ್, ‘ನಾವು ಇಲ್ಲಿರುವುದೇ ಸಾರ್ವಜನಿಕರ ಕೆಲಸ ಮಾಡಲು. ಜನರಿಗೆ ನ್ಯಾಯ ದೊರಕಿಸುವುದು ನನ್ನ ಧ್ಯೇಯ ಮತ್ತು ಆದ್ಯತೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ನಾನು ಹೇಳಿಲ್ಲ. ಈ ಕುರಿತು ಅಮಾನತು ಅಧಿಕಾರವುಳ್ಳ ಮೇಲಧಿಕಾರಿಗೆ ಪತ್ರ ಬರೆಯುವಂತೆ ಸೂಚಿಸಿದ್ದೇನೆ’ ಎಂದು ಸಮಜಾಯಿಷಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.