ADVERTISEMENT

ಪ್ರಾಣಿಗಳನ್ನು ಪಶುಗಳೆನ್ನುವುದು ಸೂಕ್ತವಲ್ಲ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಮತ

ಪಿಟಿಐ
Published 30 ಜೂನ್ 2025, 11:54 IST
Last Updated 30 ಜೂನ್ 2025, 11:54 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಬರೇಲಿ: ‘ಪ್ರಾಣಿಗಳನ್ನು ‘ಪಶುಗಳು’ ಎನ್ನುವುದು ಸರಿಯಾದ ಕ್ರಮವಲ್ಲ. ಅದರ ಬದಲು ‘ಜೀವನ ಧನ’ ಅಥವಾ ‘ಬದುಕಿನ ಆಸ್ತಿ’ ಎಂದು ಕರೆಯುವುದು ಉತ್ತಮ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೇಳಿದ್ದಾರೆ.

ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ 11ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಪ್ರಾಣಿಗಳಿಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ. ಪಶು ವೈದ್ಯರಾಗಿ ಕೆಲಸ ಮಾಡುವಾಗ ಅವುಗಳ ಕ್ಷೇಮಾಭಿವೃದ್ಧಿಯ ಕಡೆಗೇ ಗಮನ ನೀಡಬೇಕು. ನನ್ನ ಹಿನ್ನೆಲೆ ಪ್ರಕೃತಿಯೊಂದಿಗೆ ಬೆಸೆದಿದೆ. ಅರಣ್ಯ ಮತ್ತು ಕಾಡು ಪ್ರಾಣಿಗಳೊಂದಿಗೆ ಮನುಷ್ಯರ ಸಂಬಂಧವಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಇಂದು ನಮ್ಮ ಬಳಿ ತಂತ್ರಜ್ಞಾನವಿದೆ. ಹಿಂದೆ ಪ್ರಾಣಿಗಳೇ ನಮ್ಮ ಸಾರಿಗೆ ವ್ಯವಸ್ಥೆಯಾಗಿದ್ದವು. ರೈತರ ಜೀವನಾಡಿಯಾಗಿದ್ದವು. ಎಲ್ಲಾ ಪ್ರಾಣಿಗಳಲ್ಲೂ ದೇವರು ಇದ್ದಾರೆ. ನಮ್ಮ ದೇವರು ಹಾಗೂ ಋಷಿಗಳು ಕೆಲ ತತ್ವಗಳ ಆಧಾರದಲ್ಲಿ ಪ್ರಾಣಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು’ ಎಂದಿದ್ದಾರೆ.

‘ಭೂಮಿಯ ಆರೋಗ್ಯ ಮತ್ತು ಜೀವವೈವಿದ್ಯತೆಯನ್ನು ಕಾಪಾಡಲು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳನ್ನು ರಕ್ಷಿಸಬೇಕಿದೆ. ನಮ್ಮ ಬಾಲ್ಯದ ಸಂದರ್ಭದಲ್ಲಿ ರಣಹದ್ದುಗಳನ್ನು ವ್ಯಾಪಕವಾಗಿ ನೋಡುತ್ತಿದ್ದೆವು. ಆದರೆ ಈಗ ಅವು ಎಲ್ಲಿಯೂ ಕಾಣಸಿಗದು. ಯೋಚಿಸುವ ಮತ್ತು ಆಲೋಚಿಸುವ ವರವನ್ನು ದೇವರು ಮನುಷ್ಯರಿಗೆ ನೀಡಿದ್ದು, ಅದನ್ನು ಸಕಲ ಜೀವಿಗಳ ಕಲ್ಯಾಣಕ್ಕಾಗಿ ಬಳಸಬೇಕಿದೆ. ಒಂದು ಪ್ರಾಣಿಯ ರಕ್ಷಣೆಗೆ ಬಳಸುವ ಔಷಧಗಳು ಇತರ ಪ್ರಾಣಿಗಳ ಜೀವಕ್ಕೇ ಕಂಟಕವಾಗಬಹುದು. ಇಂಥವುಗಳನ್ನು ಪತ್ತೆ ಮಾಡಿ ನಿಷೇಧಿಸುವುದೇ ಪ್ರಾಣಿಗಳ ರಕ್ಷಣೆಯ ಮೊದಲ ಹೆಜ್ಜೆಯಾಗಿದೆ’ ಎಂದು ಮುರ್ಮು ಹೇಳಿದ್ದಾರೆ.

‘ಕೋವಿಡ್‌ ಸೋಂಕು ವ್ಯಾಪಿಸಿದ ಸಂದರ್ಭವು ನಮಗೆ ಎಚ್ಚರಿಕೆಯ ಜತೆಗೆ ಬಹಳಷ್ಟು ಪಾಠಗಳನ್ನು ಕಲಿಸಿದೆ. ಬಳಕೆ ಆಧಾರಿತ ಸಂಸ್ಕೃತಿಯು ಮನುಕುಲಕ್ಕೆ ಮಾತ್ರವಲ್ಲ, ಎಲ್ಲಾ ಜೀವಿಗಳು ಹಾಗೂ ಪರಿಸರಕ್ಕೂ ಮಾರಕವಾಗಲಿವೆ. ಜೀವವೈವಿದ್ಯತೆ ಹೆಚ್ಚಿಸಲು, ಝೂನೊಟಿಕ್‌ ರೋಗಗಳನ್ನು ನಿಯಂತ್ರಿಸಲು ಹಾಗೂ ಕಡಿಮೆ ಖರ್ಚಿನ ಚಿಕಿತ್ಸೆ ಹಾಗೂ ಪ್ರಾಣಿಗಳಿಗೂ ಸೂಕ್ತ ಪೋಷಕಾಂಶ ನೀಡುವ ಕಡೆ ಸಂಶೋಧನಾ ಕೇಂದ್ರಗಳು ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

‘ಪಶುವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ವಂಶವಾಹಿ ಸಂಕಲನ, ಭ್ರೂಣ ವರ್ಗಾವಣೆ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಬಿಗ್‌ ಡಾಟಾ ಅನಾಲಿಟಿಕ್ಸ್‌ ಸಾಕಷ್ಟು ಹೊಸತನವನ್ನು ತಂದಿವೆ. ಅವುಗಳ ಪರಿಣಾಮಕಾರಿ ಅನುಷ್ಠಾನ ಆಗಬೇಕಿದೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.