ADVERTISEMENT

ಮುಂಬೈ ಮಹಾರಾಷ್ಟ್ರದ ನಗರವಲ್ಲ ಎಂಬ ಅಣ್ಣಾಮಲೈ ಹೇಳಿಕೆಗೆ ಶಿವಸೇನಾ ಆಕ್ರೋಶ

ಮೃತ್ಯುಂಜಯ ಬೋಸ್
Published 11 ಜನವರಿ 2026, 5:36 IST
Last Updated 11 ಜನವರಿ 2026, 5:36 IST
<div class="paragraphs"><p>ಸಂಜಯ್ ರಾವುತ್ ಮತ್ತು&nbsp;ಅಣ್ಣಾಮಲೈ</p></div>

ಸಂಜಯ್ ರಾವುತ್ ಮತ್ತು ಅಣ್ಣಾಮಲೈ

   

ಮುಂಬೈ: ‘ಮುಂಬೈ ಮಹಾರಾಷ್ಟ್ರದ ನಗರವಲ್ಲ. ಬದಲಾಗಿ, ಅಂತರರಾಷ್ಟ್ರೀಯ ನಗರ’ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.

ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಚುನಾವಣೆ ಅಂಗವಾಗಿ ಅಣ್ಣಾಮಲೈ ಅವರು ಮುಂಬೈನಲ್ಲಿ ತಮಿಳಿಗರ ಪ್ರಭಾವ ಇರುವ ಧಾರಾವಿ ಮತ್ತು ಸಿಯಾನ್-ಕೋಳಿವಾಡ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ADVERTISEMENT

ಇದೇ ವೇಳೆ ಮಾತನಾಡಿದ ಅವರು, ‘ಬಾಂಬೆ (ಮುಂಬೈ) ಮಹಾರಾಷ್ಟ್ರ ನಗರವಲ್ಲ. ಬದಲಾಗಿ, ಅಂತರರಾಷ್ಟ್ರೀಯ ನಗರವಾಗಿದೆ. ಇದು ₹75,000 ಕೋಟಿ ಬಜೆಟ್ ಹೊಂದಿದೆ. ಚೆನ್ನೈ ₹8,000 ಕೋಟಿ ಬಜೆಟ್ ಹೊಂದಿದ್ದರೆ, ಬೆಂಗಳೂರು ₹19,000 ಕೋಟಿ ಬಜೆಟ್ ಹೊಂದಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ‘ಮುಂಬೈಯನ್ನು ಮುನ್ನಡೆಸಲು ಬಿಜೆಪಿ ತ್ರಿಬಲ್‌ ಎಂಜಿನ್ ಸರ್ಕಾರ ಸ್ಥಾಪಿಸಲು ಉತ್ಸುಕವಾಗಿದೆ. ನೀವು ತಮಿಳುನಾಡನ್ನು ನೋಡಿದರೆ ಅಲ್ಲಿ (ರಾಜ್ಯದಲ್ಲಿ) ಡಿಎಂಕೆ ಮತ್ತು ಕೇಂದ್ರದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿ ಬಿಜೆಪಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ, ಇಲ್ಲಿ ನಾವು ಸಂಭಾವ್ಯ ‘ತ್ರಿಬಲ್‌ ಎಂಜಿನ್ ಸರ್ಕಾರ’ವನ್ನು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ.

ಅಣ್ಣಾಮಲೈ ಹೇಳಿಕೆ ಕುರಿತು ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಅಣ್ಣಾಮಲೈ ಅವರು ತಮಿಳುನಾಡಿನಿಂದ ಮುಂಬೈಗೆ ಬಂದು ಮುಂಬೈ ಮಹಾರಾಷ್ಟ್ರಕ್ಕೆ ಸೇರಿಲ್ಲ ಎಂದು ಹೇಳಿರುವುದನ್ನು ನೋಡಿ ನನಗೆ ಆಘಾತವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮೌನವಹಿಸಿರುವುದು ಎಷ್ಟು ಸರಿ’ ಎಂದು ರಾವುತ್ ಪ್ರಶ್ನಿಸಿದ್ದಾರೆ.

‘ಏಕನಾಥ ಶಿಂದೆ ನೇತೃತ್ವದ ಶಿವಸೇನಾ ನಿಜವಾಗಿಯೂ ಮಹಾರಾಷ್ಟ್ರದ ಪರವಾಗಿ ನಿಂತಿದ್ದರೆ, ಈ ಅವಮಾನವನ್ನು ಸಹಿಸುತ್ತಿರಲಿಲ್ಲ. ಮುಂಬೈ ಮಹಾರಾಷ್ಟ್ರಕ್ಕೆ ಸೇರಿಲ್ಲದಿದ್ದರೆ, ಅದು ಯಾರದ್ದು?’ ಎಂದು ಫಡಣವೀಸ್‌ ಮತ್ತು ಶಿಂದೆ ಅವರನ್ನು ಕೇಳಲು ಬಯಸುತ್ತೇನೆ. ಇಂತಹ ಹೇಳಿಕೆಗಳು ಮಹಾರಾಷ್ಟ್ರದ ಜನರನ್ನು ಮತ್ತು ಮರಾಠಿರ ಘನತೆಯನ್ನು ಅವಮಾನಿಸುತ್ತವೆ. ಅಣ್ಣಾಮಲೈ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು’ ಎಂದು ರಾವುತ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.