ADVERTISEMENT

ಆರ್‌ಎಸ್‌ಎಸ್‌ ನಂಟಿನ ಆರೋಪ ನಿರಾಕರಿಸಿದ ಅಣ್ಣಾಮಲೈ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 13:52 IST
Last Updated 30 ಆಗಸ್ಟ್ 2020, 13:52 IST
ಅಣ್ಣಾಮಲೈ 
ಅಣ್ಣಾಮಲೈ    

ಚೆನ್ನೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಅಂಗಸಂಸ್ಥೆಯೊಂದರಿಂದ ‌ಯುಪಿಎಸ್‌ಸಿ ತರಬೇತಿ ಪಡೆದಿದ್ದಾರೆ ಎನ್ನುವ ಆರೋಪವನ್ನು, ಬಿಜೆಪಿ ನಾಯಕ, ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ನಿರಾಕರಿಸಿದ್ದಾರೆ.

ತಮ್ಮ ಕಾರ್ಯವೈಖರಿ ಶೈಲಿಯಿಂದ ‘ಸಿಂಗಂ’ ಎಂಬ ಖ್ಯಾತಿಗೆ ಒಳಗಾಗಿದ್ದ ಅಣ್ಣಾಮಲೈ, ಕರ್ನಾಟಕದಲ್ಲಿ ತನ್ನ ಹೆಚ್ಚಿನಕಾರ್ಯಾವಧಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಆಡಳಿತಾವಧಿಯಲ್ಲೇ ಇತ್ತು ಎಂದಿದ್ದಾರೆ. ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾದ ಬಳಿಕ, ‘ನಾಗರಿಕ ಸೇವೆಗಳಿಗೆ ಕಳುಹಿಸಲು ಅಣ್ಣಾಮಲೈ ಅವರನ್ನು ಆರ್‌ಎಸ್‌ಎಸ್‌ ಆಯ್ಕೆ ಮಾಡಿತ್ತು ಹಾಗೂ ಸಂಘದ ಅಂಗಸಂಸ್ಥೆಯಾಗಿರುವ ತರಬೇತಿ ಕೇಂದ್ರದಲ್ಲೇ ಅವರು ಯುಪಿಎಸ್‌ಸಿ ತರಬೇತಿ ಪಡೆದಿದ್ದರು’ ಮುಂತಾದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಕಾರಣದಿಂದ ಅಣ್ಣಾಮಲೈ ಪ್ರಕಟಣೆ ಮುಖಾಂತರ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಸಂದರ್ಶನ ಹಾಗೂ ಆಯ್ಕೆ ನಡೆದಿದ್ದು, 2010–11ರಲ್ಲಿ. ಅಂದು ಯುಪಿಎ ಸರ್ಕಾರ ಆಡಳಿತದಲ್ಲಿ ಇತ್ತು. ನನ್ನ ತರಬೇತಿಯೂ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದಿದೆ. ನಾನು ಕೇವಲ ಆಯ್ಕೆಯಾಗಿದ್ದು ಮಾತ್ರವಲ್ಲ, ಐಪಿಎಸ್‌ ತರಬೇತಿ ಟಾಪರ್‌ ಆಗಿದ್ದೆ. 64 ಆರ್‌ಆರ್‌ ಬ್ಯಾಚ್‌ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೆ. ತರಬೇತಿ ಸಂದರ್ಭದಲ್ಲಿ ನನ್ನ ನಾಯಕತ್ವ ಗುಣಕ್ಕೆ ಚಿನ್ನದ ಪದಕ ದೊರೆತಿತ್ತು. ಮಸ್ಸೂರಿಯಲ್ಲಿ ನಡೆದ ಜಂಟಿ ತರಬೇತಿ ಸಂದರ್ಭದಲ್ಲಿ ಐಎಎಸ್‌, ಐಪಿಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳೇ ನನ್ನನ್ನು ಆಯ್ಕೆ ಮಾಡಿದ್ದರು. ನಾನು ಯಾವುದೇ ಪಕ್ಷ ಅಥವಾ ಸಂಘಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ತರಬೇತಿ ಕೇಂದ್ರಗಳಿಗೆ ಹೋಗಿಲ್ಲ. ಪರೀಕ್ಷೆಗೆ ನಾನಾಗಿಯೇ ತಯಾರಾಗಿದ್ದೆ’ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ADVERTISEMENT

‘ಕರ್ನಾಟಕದಲ್ಲಿ ಸೇವೆಯಲ್ಲಿದ್ದ ವೇಳೆ ಕೇವಲ ನಾಲ್ಕು ದಿನ ಬಿಜೆಪಿ ಆಡಳಿತದಡಿ ಕಾರ್ಯನಿರ್ವಹಿಸಿದ್ದೆ. ಆರು ವರ್ಷ ಕಾಂಗ್ರೆಸ್‌ ಸರ್ಕಾರದಡಿ ಹಾಗೂ 1 ವರ್ಷ ಜೆಡಿಎಸ್ ಸರ್ಕಾರದಡಿ ಕಾರ್ಯನಿರ್ವಹಿಸಿದ್ದೆ. ಸಿದ್ದರಾಮಯ್ಯನವರೇ ಕರಾವಳಿ ಕರ್ನಾಟಕಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಎಚ್‌.ಡಿ.ಕುಮಾರಸ್ವಾಮಿಯವರು ನನ್ನನ್ನು ನಿಯೋಜಿಸಿದ್ದರು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.