
ಅಣ್ಣಾಮಲೈ
ಚೆನ್ನೈ: ತಿರುಪರನ್‌ಕುಂದ್ರಂ (Thiruparankundram) ವಿಚಾರದಲ್ಲಿ ತಮಿಳುನಾಡು ಸಚಿವ ರಘುಪತಿ ಅವರು ನೀಡಿರುವ ಹೇಳಿಕೆ ಗಮನಿಸಿದರೆ, ಡಿಎಂಕೆ ಸರ್ಕಾರ ‘ ಹಿಂದೂ ವಿರೋಧಿ’ ಎಂಬುದಕ್ಕೆ ಸಿಕ್ಕ ಸ್ಪಷ್ಟ ಪುರಾವೆಯಾಗಿದೆ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಲು ಅವಕಾಶ ಅವಕಾಶ ನೀಡಿರುವ ಏಕಸದಸ್ಯ ಪೀಠದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿರುವುದಕ್ಕೆ ಸಚಿವ ರಘುಪತಿ ಅವರು ‘ಶವಗಳನ್ನು ಸ್ಮಶಾನದಲ್ಲಿ ಮಾತ್ರ ಸುಡಬೇಕು, ಪದ್ಧತಿಯನ್ನು ಬದಲಾಯಿಸಬಾರದು’ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ಹೇಳಿಕೆಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
ಅಣ್ಣಾಮಲೈ ಅವರು ಜನವರಿ 6ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು,‘ಮುಖ್ಯಮಂತ್ರಿ ಸೇರಿ ಡಿಎಂಕೆ ಸದಸ್ಯರು ತಮಿಳುನಾಡು ಜನರ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅವಮಾನಿಸುತ್ತಿದ್ದಾರೆ. ಹಿಂದೂಗಳ ಪೂಜಾ ಹಕ್ಕುಗಳು ಮತ್ತು ಸಂಸ್ಕೃತಿಯನ್ನು ಅಪಹಾಸ್ಯ ಮಾಡಲು ನಿರತವಾಗಿದ್ದಾರೆ. ಈಗಲೂ ಅದನ್ನೇ ಮುಂದುವರೆಸಿದ್ದಾರೆ. ಇದು ಡಿಎಂಕೆ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಯನ್ನು ಸಾಬೀತುಪಡಿಸುತ್ತದೆ’ ಎಂದಿದ್ದಾರೆ.
‘ಜನರ ನಡುವೆ ಒಡೆದು ಆಳುವ ನೀತಿಯನ್ನು ಡಿಎಂಕೆ ಸದಸ್ಯರು ಅನುಸರಿಸಿಕೊಂಡು ಬಂದಿದ್ದಾರೆ. ಅವರ ಕೃತ್ಯಗಳನ್ನು ಗೌರವಾನ್ವಿತ ನ್ಯಾಯಾಲಯ ಎತ್ತಿ ತೋರಿಸಿದಾಗ, ನ್ಯಾಯಾಲಯದ ತೀರ್ಪನ್ನೇ ಅವಮಾನಿಸುವ ಹಂತಕ್ಕೆ ಹೋಗುತ್ತಾರೆ’ ಎಂದು ಅವರು ಕಿಡಿಕಾರಿದ್ದಾರೆ.
ತಮಿಳುನಾಡಿನ ಜನರು ಡಿಎಂಕೆ ನಾಯಕರಿಗೆ ಶೀಘ್ರದಲ್ಲೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಲು ಅವಕಾಶ ನೀಡಿರುವ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿರುವುದಕ್ಕೆ ತಮಿಳುನಾಡು ಸಚಿವ ರಘುಪತಿ, ‘ತಮಿಳರ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಬೇಕು. ಯಾರೊಬ್ಬರ ಕೋರಿಕೆಯ ಮೇರೆಗೆ ಇಲ್ಲಿಯವರೆಗೆ ಅಸ್ತಿತ್ವದಲ್ಲಿಲ್ಲದ ಪದ್ಧತಿ ಅಥವಾ ಸಂಪ್ರದಾಯವನ್ನು ಜಾರಿಗೆ ತರಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.
ಮುಂದುವರೆದು, ‘ಶವ ಸಂಸ್ಕಾರವನ್ನು ಸ್ಮಶಾನದಲ್ಲಿ ಅಲ್ಲದೆ, ಬೇರೆ ಕಡೆ ಮಾಡಲು ಸಾಧ್ಯವೇ? ಅಸ್ತಿತ್ವದಲ್ಲಿರುವ ಪದ್ಧತಿಗಳು ಮತ್ತು ಆಚರಣೆಗಳನ್ನು ಬದಲಾಯಿಸಬೇಡಿ. ಅಂತಹ ತೀರ್ಪು ನೀಡುವ ಮೂಲಕ ಏಕೆ ತಮಿಳುನಾಡಿನಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಬೇಕು’? ಎಂದು ಸಚಿವ ರಘುಪತಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.