ADVERTISEMENT

ರೈತರು ದೇಶದ್ರೋಹಿಗಳಲ್ಲ, ಸತ್ಯ ಹೇಳುವವರು ದೇಶ ವಿರೋಧಿಗಳಲ್ಲ: ಸಂಜಯ್‌ ರಾವುತ್‌

ಏಜೆನ್ಸೀಸ್
Published 5 ಫೆಬ್ರುವರಿ 2021, 9:56 IST
Last Updated 5 ಫೆಬ್ರುವರಿ 2021, 9:56 IST
ಶಿವಸೇನಾ ನಾಯಕ ಸಂಜಯ್‌ ರಾವುತ್‌
ಶಿವಸೇನಾ ನಾಯಕ ಸಂಜಯ್‌ ರಾವುತ್‌   

ನವದೆಹಲಿ: ಸರ್ಕಾರವನ್ನು ಟೀಕಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಶಿವಸೇನಾ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ರಾಜ್ಯಸಭೆಯ ಕಲಾಪದಲ್ಲಿ ಶುಕ್ರವಾರ ಮಾತನಾಡಿರುವ ಶಿವಸೇನಾ ಮುಖಂಡ ಸಂಜಯ ರಾವುತ್‌, 'ಸತ್ಯ ಹೇಳುವವರನ್ನು ದೇಶದ್ರೋಹಿ ಅಥವಾ ರಾಷ್ಟ್ರ ವಿರೋಧಿ ಎಂದು ಕರೆಯಲಾಗುತ್ತದೆ. ಸರ್ಕಾರವನ್ನು ಟೀಕಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.

ಇದೇ ವೇಳೆ ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವ ರೈತರನ್ನು ರಾಷ್ಟ್ರ ವಿರೋಧಿಗಳು ಅಥವಾ ಖಲಿಸ್ತಾನಿಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ರಾವುತ್‌ ಹರಿಹಾಯ್ದಿದ್ದಾರೆ.

ADVERTISEMENT

'ಮೊಘಲರು ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ್ದ ರೈತರನ್ನು 'ಯೋಧರು' ಎಂದು ಕರೆಯಲಾಗುತ್ತಿತ್ತು. ಆದರೆ, ದೆಹಲಿಯ ಗಡಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿರುವ ರೈತರನ್ನು ದೇಶ ವಿರೋಧಿಗಳೆಂದು ಕರೆಯಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.

ದೆಹಲಿಯ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೇಶಾದಾದ್ಯಂತ ಇರುವ ರೈತರ ಪರವಾಗಿ ಹೋರಾಡುತ್ತಿದ್ದಾರೆ. ಅವರ ಧ್ವನಿಗಳನ್ನು ಸರ್ಕಾರ ಕೇಳಬೇಕಿದೆ. ಕೂಡಲೇ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕಿದೆ ಎಂದು ಸಂಜಯ್‌ ರಾವುತ್‌ ಒತ್ತಾಯಿಸಿದ್ದಾರೆ.

'ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸತ್ಯವನ್ನು ಕೇಳಬೇಕೆಂದು ನಮಗೆ ಹೇಳುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ನಾವು ಸತ್ಯವನ್ನೇ ಕೇಳುತ್ತಿದ್ದೇವೆ, ಅಸತ್ಯವನ್ನೂ ಸಹ ಸತ್ಯವೆಂದು ಬಿಂಬಿಸಲಾಗುತ್ತಿದೆ. ಸತ್ಯವನ್ನು ಬರೆಯುವ ಅಥವಾ ಹೇಳುವವರನ್ನು ರಾಷ್ಟ್ರದ್ರೋಹಿ ಎನ್ನಲಾಗುತ್ತಿದೆ' ಎಂದು ರಾವುತ್‌ ಆರೋಪಿಸಿದ್ದಾರೆ.

'ರೈತರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ, ನೀವು ಅವರಲ್ಲಿ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೀರಿ ಮತ್ತು ನೀವು ಅವರನ್ನು ದೇಶದ್ರೋಹಿಗಳೆಂದು ಕರೆಯುತ್ತೀರಿ. ಅವರು ರಾಷ್ಟ್ರ ವಿರೋಧಿಗಳು ಅಥವಾ ಖಲಿಸ್ತಾನಿಗಳಲ್ಲ. ರೈತರ ಚಳವಳಿ ಜೀವಂತವಾಗಿರುವವರೆಗೂ ಈ ರಾಷ್ಟ್ರವು ಜೀವಂತವಾಗಿರುತ್ತದೆ' ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರ ಹೋರಾಟವನ್ನು ದೂಷಿಸುವುದು ಈ ದೇಶಕ್ಕೆ, ರೈತರಿಗೆ ಮತ್ತು ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ ಎಂದು ರಾವುತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.