
ನವದೆಹಲಿ: ‘ಅರಾವಳಿ’ ಭೂರಚನೆ ವ್ಯಾಪ್ತಿಯಲ್ಲಿ ಹೊಸದಾಗಿ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರ ಬುಧವಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಅರಾವಳಿ ಭಾಗದ ಹಲವೆಡೆ ಕೇಂದ್ರ ಸರ್ಕಾರ ಈಗಾಗಲೇ ಗಣಿಗಾರಿಕೆಯನ್ನು ನಿಷೇಧಿಸಿದೆ. ಅದರ ಜತೆಗೆ ಅರಾವಳಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕಾದ ಹೆಚ್ಚುವರಿ ಪ್ರದೇಶಗಳು ಮತ್ತು ವಲಯಗಳನ್ನು ಗುರುತಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯವು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೆ (ಐಸಿಎಫ್‌ಆರ್‌ಇ) ನಿರ್ದೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಈ ನಿಷೇಧವು ಅರಾವಳಿ ಭಾಗದಲ್ಲಿ ಏಕರೂಪವಾಗಿ ಅನ್ವಯಿಸುತ್ತದೆ. ಇಲ್ಲಿನ ಭೂರಚನೆಯ ಸಮಗ್ರತೆಯನ್ನು ಕಾಪಾಡುವ ಮತ್ತು ಅನಿಯಂತ್ರಿತ ಗಣಿಗಾರಿಕೆ ಚಟುವಟಿಕೆಗಳನ್ನು ತಡೆಯುವ ಗುರಿಯನ್ನು ಇದು ಹೊಂದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳನ್ನು ಹೆಚ್ಚುವರಿ ನಿರ್ಬಂಧಗಳೊಂದಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ತಿಳಿಸಿದೆ.
ಇಡೀ ಅರಾವಳಿ ಪ್ರದೇಶಕ್ಕೆ ವೈಜ್ಞಾನಿಕ ಆಧಾರದ ಮೇಲೆ ಸಮಗ್ರ ಮತ್ತು ಸುಸ್ಥಿರ ಗಣಿಗಾರಿಕೆ ನಿರ್ವಹಣಾ ಯೋಜನೆ ರೂಪಿಸಬೇಕು. ಅದು ಸಾರ್ವಜನಿಕರ ಸಮಾಲೋಚನೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಸರ್ಕಾರ ಐಸಿಎಫ್‌ಆರ್‌ಇಗೆ ಹೇಳಿದೆ.
ಅರಾವಳಿ ಪರಿಸರ ವ್ಯವಸ್ಥೆಯ ದೀರ್ಘಕಾಲೀನ ರಕ್ಷಣೆಗೆ ಸರ್ಕಾರ ಪೂರ್ಣವಾಗಿ ಬದ್ಧವಾಗಿದೆ. ಮರುಭೂಮೀಕರಣ ತಡೆಗಟ್ಟಲು, ಜೀವವೈವಿಧ್ಯತೆ ರಕ್ಷಿಸಲು, ಜಲಸಂಪನ್ಮೂಲ ಮರುಪೂರಣ ಮಾಡಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಹಿನ್ನೆಲೆ:
ಪರಿಸರ ಸಚಿವಾಲಯ ನೇತೃತ್ವದ ಸಮಿತಿಯು ಅರಾವಳಿ ಬೆಟ್ಟಗಳು ಮತ್ತು ಅರಾವಳಿ ಶ್ರೇಣಿಯನ್ನು ರೂಪಿಸುವ ಏಕರೂಪ ಕಾನೂನು ವ್ಯಾಖ್ಯಾನ ಕುರಿತು ಮಾಡಿದ್ದ ಶಿಫಾರಸನ್ನು ಸುಪ್ರೀಂ ಕೋರ್ಟ್ 2025 ನವೆಂಬರ್‌ನಲ್ಲಿ ಅಂಗೀಕರಿಸಿತ್ತು.
ಅದರ ಪ್ರಕಾರ, 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ‘ಅರಾವಳಿ ಬೆಟ್ಟ’ ಎಂದು, ಎರಡು ಬೆಟ್ಟಗಳ ನಡುವೆ ಕನಿಷ್ಠ 500 ಮೀಟರ್ ಅಂತರವಿದ್ದರೆ ಅದನ್ನು ‘ಅರಾವಳಿ ಪರ್ವತ ಶ್ರೇಣಿ’ ಎಂದು ಕರೆಯಲಾಗುತ್ತದೆ. ‘ಅರಾವಳಿ’ ಕುರಿತ ಈ ಹೊಸ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ ಬಳಿಕ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ರಾಜಸ್ಥಾನ, ಹರಿಯಾಣ ಸೇರಿದಂತೆ ‘ಅರಾವಳಿ ಉಳಿಸಿ’ ಹೋರಾಟ ರೂಪುಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.