ADVERTISEMENT

ಕೋಟ್ಯಧಿಪತಿಗಳ ಸಾಲ ಮನ್ನಾ ನಿಷೇಧಿಸುವ ಕಾನೂನು ರೂಪಿಸಿ: ಮೋದಿಗೆ ಕೇಜ್ರಿವಾಲ್ ಪತ್ರ

ಪಿಟಿಐ
Published 28 ಜನವರಿ 2025, 9:21 IST
Last Updated 28 ಜನವರಿ 2025, 9:21 IST
<div class="paragraphs"><p>ಅರವಿಂದ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ</p></div>

ಅರವಿಂದ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ

   

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌, ಕೋಟ್ಯಧಿಪತಿಗಳ ಸಾಲ ಮನ್ನಾ ಮಾಡುವುದನ್ನು ನಿಷೇಧಿಸಲು ರಾಷ್ಟ್ರವ್ಯಾಪಿ ಕಾನೂನು ರೂಪಿಸುವಂತೆ ಒತ್ತಾಯಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಸಾವಿರಾರು ಕೋಟಿ ಮೌಲ್ಯದ ಕಾರ್ಪೋರೇಟ್‌ ಸಾಲಗಳನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರವು ಶ್ರೀಮಂತರ ಪರ ನಿಂತಿದೆ ಎಂದು ಆರೋಪಿಸಿದರು.

ADVERTISEMENT

‘ಕಾರ್ಪೋರೇಟ್‌ ಸಾಲ ಮನ್ನಾದಿಂದ ತೆರಿಗೆ ಹೊರೆಯು ಸಾಮಾನ್ಯ ಜನರ ಮೇಲೆ ಬೀಳುತ್ತಿದ್ದು, ಇದರ ಲಾಭವನ್ನು ಶ್ರೀಮಂತರು ಪಡೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಸಾಮಾನ್ಯ ಜನರು ತಮ್ಮ ಅರ್ಧದಷ್ಟು ಸಂಬಳವನ್ನು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಶ್ರೀಮಂತರ ಸಾಲಗಳು ಮನ್ನಾ ಆಗುತ್ತಿವೆ. ಕೇಂದ್ರ ಸರ್ಕಾರವು ಸಾಮಾನ್ಯ ಜನರ ಗೃಹ ಸಾಲ, ವಾಹನ ಸಾಲ ಮತ್ತು ಇತರ ಆರ್ಥಿಕ ಹೊರೆಯನ್ನು ಮನ್ನಾ ಮಾಡುವುದಿಲ್ಲ ಏಕೆ’ ಎಂದು ಪ್ರಶ್ನಿಸಿದ್ದಾರೆ.

ಕೋಟ್ಯಧಿಪತಿಗಳ ಸಾಲ ಮನ್ನಾ ಮಾಡುವುದನ್ನು ನಿಲ್ಲಿಸುವುದರಿಂದ ಆದಾಯ ತೆರಿಗೆ ಮತ್ತು ಜಿಎಸ್‌ಟಿ ದರಗಳನ್ನು ಅರ್ಧದಷ್ಟು ಕಡಿಮೆ ಮಾಡಲು, ತೆರಿಗೆ ವಿಧಿಸಬಹುದಾದ ಆದಾಯ ಮಿತಿಯನ್ನು ದ್ವಿಗುಣಗೊಳಿಸಲು, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕಲು ಸರ್ಕಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.

ಇದೊಂದು ದೊಡ್ಡ ಹಗರಣವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸಮಯ ಬಂದಿದೆ ಎಂದೂ ಹೇಳಿದರು.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ 8ಕ್ಕೆ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.