ADVERTISEMENT

2025-26ನೇ ಆರ್ಥಿಕ ವರ್ಷದಲ್ಲಿ ₹1,064 ಕೋಟಿ ಮೊತ್ತದ ಅಡಿಕೆ ಆಮದು: ಕೇಂದ್ರಸರ್ಕಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 15:49 IST
Last Updated 9 ಆಗಸ್ಟ್ 2025, 15:49 IST
ಅಡಿಕೆ
ಅಡಿಕೆ   

ನವದೆಹಲಿ: 2025-26ನೇ ಆರ್ಥಿಕ ವರ್ಷದಲ್ಲಿ ಹತ್ತು ರಾಷ್ಟ್ರಗಳಿಂದ ₹1,064 ಕೋಟಿ ಮೊತ್ತದ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ. 

ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಳಿರುವ ಪ್ರಶ್ನೆಗೆ ಇಲಾಖೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್‌ ಈ ಉತ್ತರ ನೀಡಿದ್ದಾರೆ. 

ಅಂತಹ ಆಮದಿನ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿರಸಿ ಮಾರುಕಟ್ಟೆಯಲ್ಲಿ 2024ರ ಜನವರಿಯಿಂದ ಜೂನ್‌ ಅವಧಿಯಲ್ಲಿ ಕ್ವಿಂಟಲ್‌ ಅಡಿಕೆಗೆ ₹36,316 ದರ ಇತ್ತು. ಈ ವರ್ಷ ಜನವರಿಯಿಂದ ಜೂನ್‌ ಅವಧಿಯಲ್ಲಿ ಬೆಲೆ ₹37,856ಕ್ಕೆ ಏರಿದೆ ಎಂದು ಉದಾಹರಣೆ ನೀಡಿದ್ದಾರೆ. 

ADVERTISEMENT

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅಡಿಕೆ ಆಮದು ಮೌಲ್ಯ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದೂ ಉತ್ತರ ನೀಡಿದ್ದಾರೆ. ಅಡಿಕೆಯನ್ನು ಮುಖ್ಯವಾಗಿ ಶ್ರೀಲಂಕಾ, ಮ್ಯಾನ್ಮಾರ್, ಇಂಡೊನೇಷ್ಯಾ, ಬಾಂಗ್ಲಾದೇಶ, ಯುಎಇ, ನೇಪಾಳ, ಒಮಾನ್, ಮಲೇಷ್ಯಾ, ಸಿಂಗಪುರ ಮತ್ತು ಥಾಯ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಬಹುಪಾಲು ಅಡಿಕೆ ಆಮದು ಆಗುತ್ತಿರುವುದು ಶ್ರೀಲಂಕಾ, ಮ್ಯಾನ್ಮಾರ್, ಇಂಡೊನೇಷ್ಯಾದಿಂದ ಎಂದು ವಿವರಿಸಿದ್ದಾರೆ. 

ಅಡಿಕೆ ಮಂಡಳಿ ಸ್ಥಾಪನೆ ಇಲ್ಲ

ಅಡಿಕೆ ಕೃಷಿ ಪ್ರದೇಶ ವಿಸ್ತರಣೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸಚಿವರು ಪುನರುಚ್ಚರಿಸಿದ್ದಾರೆ. ಕಾಫಿ ಮಂಡಳಿ, ರಬ್ಬರ್ ಮಂಡಳಿ, ಟೀ ಮಂಡಳಿ ಮುಂತಾದವುಗಳ ಮಾದರಿಯಲ್ಲಿ ಅಡಿಕೆ ಮಂಡಳಿ ಸ್ಥಾಪಿಸುವ ಪ್ರಸ್ತಾವ ಇದೆಯೇ ಎಂದು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ್ದರು. 

ರಾಜ್ಯದಲ್ಲೇ ಅತೀ ಹೆಚ್ಚು ಉತ್ಪಾದನೆ 

ದೇಶದಲ್ಲಿ ಅತೀ ಹೆಚ್ಚು ಅಡಿಕೆ ಉತ್ಪಾದಿಸುವ ರಾಜ್ಯ ಕರ್ನಾಟಕ. 2023-24ರ ಅಂದಾಜಿನ ಪ್ರಕಾರ, ರಾಜ್ಯವು 6.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 10.32 ಲಕ್ಷ ಟನ್ ಅಡಿಕೆ ಉತ್ಪಾದಿಸುತ್ತದೆ. ಇದು ದೇಶದ ಒಟ್ಟು ಅಡಿಕೆ ಉತ್ಪಾದನೆಯ ಶೇ 73 ಮತ್ತು ಒಟ್ಟು ಅಡಿಕೆ ಪ್ರದೇಶದ ಶೇ 71 ರಷ್ಟಿದೆ.

ಎಲೆಚುಕ್ಕಿ ರೋಗ ನಿರ್ವಹಣೆಗೆ ₹37 ಕೋಟಿ

ಅಡಿಕೆಯ ಎಲೆ ಚುಕ್ಕೆ ರೋಗ ನಿರ್ವಹಿಸಲು 2024-25ರಲ್ಲಿ ರಾಜ್ಯಕ್ಕೆ ₹37 ಕೋಟಿ ಮಂಜೂರು ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಅಡಿಕೆ ಬೆಳೆಗೆ ರೋಗ ಬಾಧಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೃಷಿ ಸಚಿವಾಲಯವು ಮಧ್ಯಪ್ರವೇಶಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದೆ ಮತ್ತು ಆರ್ಥಿಕ ನೆರವು ನೀಡಿದೆ ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಪುನರ್‌ ರಚಿಸಿದ ಹವಾಮಾನ ಬೆಳೆ ಆಧಾರಿತ ವಿಮಾ ಯೋಜನೆ ಅಡಿಯಲ್ಲಿ ಅಡಿಕೆ ಬೆಳೆಯನ್ನೂ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.