
ಅರವಿಂದ ಕೇಜ್ರಿವಾಲ್
ನವದೆಹಲಿ: ‘ನಮ್ಮ ವಿರುದ್ಧದ ಈ ಭ್ರಷ್ಟಾಚಾರ ಪ್ರಕರಣವು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಿತೂರಿಯಾಗಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರತಿಪಾದಿಸಿದರು.
ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಖುಲಾಸೆಗೊಂಡ ಆದೇಶ ಹೊರಬಿದ್ದ ಕೂಡಲೇ, ಕೋರ್ಟ್‌ನಿಂದ ಹೊರಬಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಈ ವೇಳೆ ಭಾವನಾತ್ಮಕವಾಗಿ ಮಾತನಾಡಿದ ಅವರು ಕಣ್ಣೀರು ಹಾಕಿದರು.
‘ನಾನು, ಸಿಸೋಡಿಯಾ ಮತ್ತು ಎಎಪಿ ಪಕ್ಷದವರು ಪೂರ್ಣ ಪ್ರಾಮಾಣಿಕರು ಎಂಬುದು ನ್ಯಾಯಾಲಯದ ಈ ಆದೇಶದಿಂದ ಸ್ಪಷ್ಟವಾಗುತ್ತದೆ’ ಎಂದರು.
‘ಅಬಕಾರಿ ನೀತಿ ಪ್ರಕರಣದ ಮೂಲಕ ಎಎಪಿಯನ್ನು ಮುಗಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಿತೂರಿ ರೂಪಿಸಿದ್ದರು’ ಎಂದು ಕೇಜ್ರಿವಾಲ್ ಆರೋಪಿಸಿದರು.
‘ಮೋದಿ ಮತ್ತು ಅಮಿತ್ ಶಾ ಅವರು ಒಟ್ಟಾಗಿ ಸ್ವತಂತ್ರ ಭಾರತದ ಅತಿದೊಡ್ಡ ರಾಜಕೀಯ ಪಿತೂರಿಯನ್ನು ರೂಪಿಸಿದರು. ಎಎಪಿ ಮುಗಿಸಲು ಪಕ್ಷದ ಐವರು ಹಿರಿಯ ನಾಯಕರನ್ನು ಜೈಲಿಗಟ್ಟಿದರು. ಆದರೆ ದೇವರು ನಮ್ಮೊಂದಿಗಿದ್ದಾನೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ’ ಎಂದು ಅವರು ಸ್ಮರಿಸಿದರು.
‘ಹಾಲಿ ಮುಖ್ಯಮಂತ್ರಿಯನ್ನು ಮನೆಯಿಂದ ಜೈಲಿಗೆ ಎಳೆದೊಯ್ದದ್ದು ಇದೇ ಮೊದಲು’ ಎಂದ ಅವರು, ‘ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಯಿತು. ಸುದ್ದಿ ವಾಹಿನಿಗಳಲ್ಲಿ ದಿನದ 24 ಗಂಟೆಯೂ ಈ ಬಗ್ಗೆ ಚರ್ಚೆಗಳು ನಡೆದವು’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.