
ಕೋರ್ಟ್ ಅವರಣದಲ್ಲಿ ಅರವಿಂದ ಕೇಜ್ರಿವಾಲ್ ಅವರು ಕಣ್ಣೀರು ಹಾಕಿದರು
Credit: Screengrab
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಕೋರ್ಟ್ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ನಾಯಕರು ನಮ್ಮ ಮೇಲೆ ಆರೋಪ ಮಾಡುತ್ತಿದ್ದರು. ಇಂದು ನ್ಯಾಯಾಲಯವು ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಇದು ಸತ್ಯಕ್ಕೆ ಲಭಿಸಿದ ಗೆಲುವು’ ಎಂದು ಭಾವುಕರಾಗಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಪಕ್ಷದ (ಎಎಪಿ) ವಿರುದ್ಧ ಪಿತೂರಿ ನಡೆಸಿದ್ದರು. ಹಾಲಿ ಮುಖ್ಯಮಂತ್ರಿಯಾಗಿದ್ದ ನನ್ನನ್ನೂ ಸೇರಿದಂತೆ ಐವರು ಎಎಪಿ ನಾಯಕರನ್ನು ಬಂಧಿಸಲಾಗಿತ್ತು. ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಗಿತ್ತು. ಪ್ರತಿ ಚಾನೆಲ್‌ನಲ್ಲಿಯೂ ನಮ್ಮನ್ನು ಭ್ರಷ್ಟರೆಂದು ಬಿಂಬಿಸಲಾಗಿತ್ತು. ಆದರೆ, ನಾನು ಭ್ರಷ್ಟನಲ್ಲ. ನಾನು ಪ್ರಾಮಾಣಿಕತೆಯನ್ನು ಮಾತ್ರ ಗಳಿಸಿದ್ದೇನೆ. ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರು ಪ್ರಾಮಾಣಿಕರು ಎಂದು ನ್ಯಾಯಾಲಯ ಹೇಳಿದೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ ಪ್ರಕರಣ ಕುರಿತು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಆದೇಶ ಪ್ರಕಟಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ ಮತ್ತು ಆರೋಪಪಟ್ಟಿಯಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಇತರ 21 ಜನರನ್ನು ಖುಲಾಸೆಗೊಳಿಸಿ ಜಿತೇಂದ್ರ ಸಿಂಗ್ ತೀರ್ಪು ನೀಡಿದ್ದಾರೆ.
ದೆಹಲಿಯಲ್ಲಿ ಹಿಂದಿನ ಎಎಪಿ ಸರ್ಕಾರವು ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ನಡೆಸಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.