ಪಶುಪತಿ ಅಶೋಕ್ ಗಜಪತಿ ರಾಜು, ಪ್ರೊ. ಅಶೀಮ್ ಕುಮಾರ್ ಘೋಷ್, ಕವಿಂದರ್ ಗುಪ್ತಾ
ನವದೆಹಲಿ: ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವ ಪಿ. ಅಶೋಕ್ ಗಜಪತಿ ರಾಜು ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮಾಜಿ ಮುಖ್ಯಸ್ಥ ಪ್ರೊ. ಆಶಿಮ್ ಕುಮಾರ್ ಘೋಷ್ ಅವರನ್ನು ಕ್ರಮವಾಗಿ ಗೋವಾ ಮತ್ತು ಹರಿಯಾಣ ರಾಜ್ಯಪಾಲರನ್ನಾಗಿ ಸೋಮವಾರ ನೇಮಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಕವಿಂದರ್ ಗುಪ್ತಾ ಅವರನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
ಅವರು ಅಧಿಕಾರ ವಹಿಸಿಕೊಳ್ಳುವ ದಿನಾಂಕಗಳಿಂದ ಈ ನೇಮಕಾತಿಗಳು ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಟಿಡಿಪಿ ನಾಯಕ ರಾಜು ಅವರು ಕೇರಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಪಿಳ್ಳೈ 2019ರಿಂದ ಗೋವಾ ರಾಜ್ಯಪಾಲರಾಗಿದ್ದಾರೆ.
ಹರಿಯಾಣದಲ್ಲಿ ಹಿರಿಯ ಆರ್‌ಎಸ್‌ಎಸ್ ನಾಯಕ ಬಂಡಾರು ದತ್ತಾತ್ರೇಯ ಅವರ ಬದಲಿಗೆ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಪ್ರಾಧ್ಯಾಪಕರಾಗಿರುವ ಘೋಷ್ 1999 ಮತ್ತು 2001ರ ನಡುವೆ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು.
ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಬ್ರಿಗೇಡಿಯರ್ (ನಿವೃತ್ತ) ಬಿ.ಡಿ ಮಿಶ್ರಾ ಅವರ ರಾಜೀನಾಮೆ ಸ್ವೀಕರಿಸಿರುವ ರಾಷ್ಟ್ರಪತಿಯವರು, ಆ ಸ್ಥಾನಕ್ಕೆ ಕವಿಂದರ್ ಗುಪ್ತಾ ಅವರನ್ನು ನೇಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.