ನವದೆಹಲಿ: ಮುಸ್ಲಿಂ ಸಮುದಾಯವನ್ನು ನಿಂದಿಸುವ ಹಾಗೂ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಕೃತಕ ಬುದ್ಧಿಮತ್ತೆ (AI) ವಿಡಿಯೊವನ್ನು ಹಂಚಿಕೊಂಡ ಬಿಜೆಪಿಯ ಅಸ್ಸಾಂ ಘಟಕದ ಪೋಸ್ಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
‘ಬಿಜೆಪಿ ಇಲ್ಲದ ಅಸ್ಸಾಂ’ ಎಂಬ ಶೀರ್ಷಿಕೆಯಡಿ ಎಐ ಆಧಾರಿತ ವಿಡಿಯೊ ಹಂಚಿಕೊಂಡಿರುವ ಬಿಜೆಪಿಯ ಅಸ್ಸಾಂ ಘಟಕವು, ಅಕ್ರಮವಾಗಿ ಅಸ್ಸಾಂ ಪ್ರವೇಶಿಸಿರುವ ನುಸುಳುಕೋರರು ರಾಜ್ಯದ ಎಲ್ಲಾ ಸಾರ್ವಜನಿಕ ಪ್ರದೇಶಗಳನ್ನು ಆವರಿಸಿಕೊಂಡು ಮತ್ತು ಸರ್ಕಾರಿ ಜಮೀನು ಹೊಂದಿರುವುದು ಇದರಲ್ಲಿದೆ. ಇದರಲ್ಲಿ ಕಾಂಗ್ರೆಸ್ ನಾಯಕರಾದ ಗೌರವ್ ಗೊಗೊಯಿ ಮತ್ತು ರಾಹುಲ್ ಗಾಂಧಿ ಅವರನ್ನು ತೋರಿಸಿ ‘ಪಾಕಿಸ್ತಾನ್ ಲಿಂಕ್ ಪಾರ್ಟಿ’ ಎಂಬ ಶೀರ್ಷಿಕೆ ನೀಡಲಾಗಿದೆ.
ರಾಜಕೀಯ ಮುಖಂಡರು ಹಾಗೂ ಸಾಮಾಜಿಕ ಮಾದ್ಯಮಗಳ ಬಳಕೆದಾರರು ಈ ವಿಡಿಯೊಗೆ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಇದು ಪ್ರಚೋದನೆ ನೀಡಿದಂತಿದೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ಮನ್ಸೂರ್ ಖಾನ್ ಪ್ರತಿಕ್ರಿಯಿಸಿ, ‘ಸಮಾಜದ ಸ್ವಾಸ್ಥ್ಯ ಹಾಳುಮಾಡಲು ಮತ್ತು ನಮ್ಮ ಮೌಲ್ಯಗಳನ್ನು ಅವಮಾನಿಸಲು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸುಳ್ಳು ಹಾಗೂ ಎಐ ಸಿದ್ಧಪಡಿಸಿದ ವಿಡಿಯೊ ಹಂಚಿಕೊಳ್ಳುವ ಮೂಲಕ ಬಿಜೆಪಿಯು ರಾಜಕೀಯ ಪ್ರಚಾರದ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ. ನಿಮ್ಮ ಈ ವಿಷಯುಕ್ತ ಪ್ರಚಾರಕ್ಕೆ ಅಸ್ಸಾಂನ ಜನರು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವೇದಿಕೆಯ ಅಧ್ಯಕ್ಷೆ ಸುಪ್ರಿಯಾ ಶ್ರೀನೇತ್ ಪ್ರತಿಕ್ರಿಯಿಸಿ, ‘ಬಿಜೆಪಿಯು ಈ ರೀತಿ ಸಮಾಜದಲ್ಲಿ ದ್ವೇಷ ಭಾವನೆ ಮೂಡಿಸುವ ಕೃತ್ಯ ನಡೆಸುತ್ತಿದೆ. ನೀವು ಎಂದಿನಂತೆ ಮೂಖ ಪ್ರೇಕ್ಷಕರಾಗಿರುತ್ತೀರಾ ಅಥವಾ ಸಮರ್ಥಿಸಿಕೊಳ್ಳುತ್ತೀರಾ?’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಎಐ ವಿಡಿಯೊ ಹಂಚಿಕೊಂಡು ಖಂಡಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ, ‘ಬಿಜೆಪಿ ಇಲ್ಲದ ಅಸ್ಸಾಂನಲ್ಲಿ ಮುಸ್ಲಿಮರೇ ತುಂಬಿದ್ದಾರೆ ಎಂದು ತೋರಿಸಿರುವ ಕೇಸರಿ ಪಕ್ಷದ ಕನಸಿನಲ್ಲಿ, ಮುಸ್ಲಿಂ ಮುಕ್ತ ಭಾರತದ ಯೋಜನೆ ಇದೆ. ನಿಜವಾದ ರೂಪದಲ್ಲಿ ಹಿಂದುತ್ವ ಸಿದ್ಧಾಂತ ಹೇರಿಕೆಯ ಸೂಚನೆ ನೀಡಿದೆ. ಭಾರತದಲ್ಲಿ ಮುಸ್ಲಿಮರು ಇರುವುದೇ ಬಿಜೆಪಿಯವರಿಗೆ ದೊಡ್ಡ ಸಮಸ್ಯೆಯಾಗಿದೆ. ‘ಮುಸ್ಲಿಂ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿಗೆ ಭಾರತಕ್ಕಾಗಿ ಯಾವ ದೂರದೃಷ್ಟಿಯೂ ಇಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.