ADVERTISEMENT

ದೇಶದ್ರೋಹ ಪ್ರಕರಣ | ಪತ್ರಕರ್ತರ ವಿರುದ್ಧದ FIRನಲ್ಲಿ ಸತ್ಯಪಾಲ್ ಹೆಸರು ಉಲ್ಲೇಖ

ಪಿಟಿಐ
Published 23 ಆಗಸ್ಟ್ 2025, 9:59 IST
Last Updated 23 ಆಗಸ್ಟ್ 2025, 9:59 IST
<div class="paragraphs"><p>ಅಸ್ಸಾಂ ಪೊಲೀಸರು</p></div>

ಅಸ್ಸಾಂ ಪೊಲೀಸರು

   

–ಪಿಟಿಐ ಚಿತ್ರ

ಗುವಾಹಟಿ: ದೇಶದ್ರೋಹ ಪ್ರಕರಣ ಸಂಬಂಧ ‘ದಿ ವೈರ್‌’ನ ಪತ್ರಕರ್ತರಾದ ಸಿದ್ಧಾರ್ಥ್ ವರದರಾಜನ್‌, ಕರಣ್‌ ಥಾಪರ್‌, ಅಶುತೋಷ್ ಭಾರದ್ವಾಜ್, ಅಭಿಸರ್ ಶರ್ಮಾ ವಿರುದ್ಧ ಗುವಾಹಟಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ದಿವಂಗತ ಸತ್ಯಪಾಲ್ ಮಲಿಕ್, ಪಾಕ್‌ ಪತ್ರಕರ್ತ ನಜಮ್ ಸೇಥಿ ಸೇರಿದಂತೆ ಅಪರಿಚಿತ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ದೇಶದ್ರೋಹ ಪ್ರಕರಣ ಸಂಬಂಧ ಮೋರಿಗಾಂವ್ ಪೊಲೀಸರು ಆಗಸ್ಟ್ 22ರಂದು ವಿಚಾರಣೆಗೆ ‌ಹಾಜರಾಗುವಂತೆ ವರದರಾಜನ್ ಮತ್ತು ಥಾಪರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ, ವರದರಾಜನ್ ಹಾಗೂ ಥಾಪರ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿತ್ತು.

ವರದರಾಜನ್ ಹಾಗೂ ಥಾಪರ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 152 (ದೇಶದ್ರೋಹ), 196, 197 (1), 353, 45 ಮತ್ತು 61ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಪಾಕ್‌ನ ನಜಮ್ ಸೇಥಿ ಅವರ ಪಾತ್ರವು ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ದಬ್ಬಾಳಿಕೆಯೆಂದು ಬಿಂಬಿಸುವ ಅಂತರರಾಷ್ಟ್ರೀಯ ಆಯಾಮವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕರಣ್‌ ಥಾಪರ್‌ ಅವರು ನಜಮ್ ಸೇಥಿ, ಅಶುತೋಷ್ ಭಾರದ್ವಾಜ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರೊಂದಿಗೆ ಸರಣಿ ಸಂದರ್ಶನಗಳನ್ನು ಆಯೋಜಿಸಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಸೇಥಿ, ಭಾರದ್ವಾಜ್ ಸೇರಿದಂತೆ ಇತರರು ಭಾರತ ಸರ್ಕಾರದ ವಿರುದ್ಧ ಗಂಭೀರ ಮತ್ತು ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ಪತ್ರಕರ್ತರಿಗೆ ಅಸ್ಸಾಂ ಪೊಲೀಸರು ಸಮನ್ಸ್ ನೀಡಿರುವುದರ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೊಯ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.