ADVERTISEMENT

ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಬಿಜೆಪಿ,ಕಾಂಗ್ರೆಸ್: ಚುನಾವಣಾ ರಂಗಕ್ಕೆ ತಾರೆಯರ ರಂಗು

ಖುಷ್ಬೂ, ಸುರೇಶ್‌ ಗೋಪಿ, ಬಾಬುಲ್‌ ಸುಪ್ರಿಯೊ, ಲಾಕೆಟ್‌ ಚಟರ್ಜಿ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 19:51 IST
Last Updated 14 ಮಾರ್ಚ್ 2021, 19:51 IST
ಚುನಾವಣಾ ರಂಗಕ್ಕೆ ತಾರೆಯರ ರಂಗು
ಚುನಾವಣಾ ರಂಗಕ್ಕೆ ತಾರೆಯರ ರಂಗು   

ನವದೆಹಲಿ: ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ವಿಧಾನಸಭೆಯ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಪ್ರಕಟಿಸಿದೆ. ಕೇಂದ್ರದ ಒಬ್ಬ ಸಚಿವ, ಹಲವು ಸಂಸದರು ಮತ್ತು ಸಿನಿಮಾ ತಾರೆಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ ಪಕ್ಷವು ಕೂಡ ಕೇರಳ ಮತ್ತು ತಮಿಳುನಾಡು ವಿಧಾನಸಭೆಯ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನ ಪಟ್ಟಿಯಲ್ಲಿಯೂ ಒಬ್ಬ ಸಂಸದ ಮತ್ತು ಸಿನಿಮಾ ನಟರು ಇದ್ದಾರೆ.

ಕೇರಳದ 112, ಅಸ್ಸಾಂನ 17, ಪಶ್ಚಿಮ ಬಂಗಾಳದ 63 ಮತ್ತು ತಮಿಳುನಾಡಿನ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಕೇಂದ್ರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್‌ ಲಾಹಿರಿ ಅವರು ಅಲಿಪುರ್‌ದೌರ್ ಕ್ಷೇತ್ರದಿಂದ, ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಅವರು ಟಾಲಿಗುಂಗೆ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಸ್ವಪನ್‌ ದಾಸ್‌ಗುಪ್ತಾ ಅವರು ತಾರಕೇಶ್ವರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ADVERTISEMENT

ನಟಿ ಮತ್ತು ಸಂಸದೆ ಲಾಕೆಟ್‌ ಚಟರ್ಜಿ (ಚುಂಚುರ), ಸಂಸದ ನಿಷಿತ್‌ ಪ್ರಮಾಣಿಕ್‌ (ದಿನ್‌ಹಟ) ಅವರು ಪಶ್ಚಿಮ ಬಂಗಾಳ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ. ಕೇರಳದಿಂದಲೂ ಹಲವು ಗಣ್ಯರನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ. ‘ಮೆಟ್ರೊಮ್ಯಾನ್‌’ ಎಂದೇ ಖ್ಯಾತರಾಗಿರುವ ಮೆಟ್ರೊ ತಂತ್ರಜ್ಞ ಇ. ಶ್ರೀಧರನ್‌ ಅವರು ಪಾಲಕ್ಕಾಡ್‌ನಿಂದ ಮತ್ತು ಕೇಂದ್ರದ ಮಾಜಿ ಸಚಿವ ಕೆ.ಜೆ. ಅಲ್ಫೋನ್ಸ್‌ ಅವರು ಕಾಂಜಿರಪಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಮತ್ತು ನಟ ಸುರೇಶ್‌ ಗೋಪಿ ಅವರು ತ್ರಿಶ್ಶೂರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್‌ ಗೋಪಿ ಅವರು ತ್ರಿಶ್ಶೂರ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಕ್ರೈಸ್ತ ಸಮುದಾಯದ ಎಂಟು, ಮುಸ್ಲಿಂ ಸಮುದಾಯದ ಇಬ್ಬರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಕಲ್ಲಿಕೋಟೆ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಬ್ದುಲ್‌ ಸಲಾಂ ಅವರು ಮಲಪ್ಪುರದ ತಿರೂರ್‌ನಿಂದ ಮತ್ತು ಮಾಜಿ ಐಪಿಎಸ್‌ ಅಧಿಕಾರಿ ಜೇಕಬ್‌ ಥಾಮಸ್‌ ಅವರಿಗೆ ಇರಿಞ್ಞಾಲ್‌ಕುಡದಿಂದ ಟಿಕೆಟ್‌ ಕೊಡಲಾಗಿದೆ.

ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಅವರು ಮಂಜೇಶ್ವರ ಮತ್ತು ಪತ್ತನಂತಿಟ್ಟದ ಕೊನ್ನಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸುರೇಂದ್ರನ್‌ ಅವರು ಮಂಜೇಶ್ವರದಲ್ಲಿ 89 ಮತಗಳ ಅಂತರದಿಂದ ಸೋತಿದ್ದರು. ಶಬರಿಮಲೆಗೆ ಮಹಿಳಾ ಪ್ರವೇಶದ ವಿರುದ್ಧ ಬಿಜೆಪಿ ನಡೆಸಿದ ಚಳವಳಿಯಿಂದಾಗಿ ಕೊನ್ನಿ ಕ್ಷೇತ್ರದಲ್ಲಿ ಆ ಪಕ್ಷಕ್ಕೆ ಹೆಚ್ಚು ಮತಗಳು ಬರಬಹುದು ಎಂಬ ನಿರೀಕ್ಷೆ ಇದೆ. 2019ರಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಸುರೇಂದ್ರನ್‌ ಅವರಿಗೆ 39,786 ಮತಗಳು ಸಿಕ್ಕಿದ್ದವು.

ರಾಜ್ಯದ ನಾಯಕರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲದ ಹಿರಿಯ ನಾಯಕಿ ಶೋಭಾ ಸುರೇಂದ್ರನ್‌ ಅವರಿಗೆ ಟಿಕೆಟ್‌ ನೀಡಿಲ್ಲ.

ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್‌ ಅವರು ತಮಿಳುನಾಡಿನ ಥೌಸಂಡ್‌ ಲೈಟ್ಸ್‌ ಕೇತ್ರದಿಂದ ಸ್ಪರ್ಧಿಸಲಿದ್ದಾರೆ. ತಮಿಳುನಾಡು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ವನತಿ ಶ್ರೀನಿವಾಸನ್‌ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಕ್ಕಳ್‌ ನೀಧಿ ಮಯ್ಯಂ ಅಧ್ಯಕ್ಷ ಮತ್ತು ಸಿನಿಮಾ ತಾರೆ ಕಮಲ್‌ ಹಾಸನ್‌ ಇಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ.

ಕೇರಳದಲ್ಲಿ ಬಿಜೆಪಿ ಹೊಂದಿರುವ ಏಕೈಕ ಕ್ಷೇತ್ರ ನೇಮಮ್‌ನಿಂದ ಪ್ರಭಾವಿ ಮುಖಂಡ ಮತ್ತು ಸಂಸದ ಕೆ. ಮುರಳೀಧರನ್‌ ಅವರನ್ನು ಕಣಕ್ಕೆ ಇಳಿಸುವುದಾಗಿ ಕಾಂಗ್ರೆಸ್‌ ಪ್ರಕಟಿಸಿದೆ. ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರು ಪುದುಪಳ್ಳಿಯಿಂದ, ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಅವರು ಹರಿಪಾಡ್‌ನಿಂದ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್‌ ಪಕ್ಷವು ಕೇರಳದ 92 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು 86 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಸಿನಿಮಾ ನಟ ಧರ್ಮಜನ್‌ ಅವರು ಕೋಯಿಕ್ಕೋಡ್‌ನ ಬಾಲುಶ್ಶೇರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಯುವ ಮುಖಂಡರದ ಶಫಿ ಪರಂಬಿಲ್‌, ವಿ.ಟಿ. ಬಲರಾಂ, ಎ.ಎಂ. ರೋಹಿತ್‌, ಡಾ. ಸರಿನ್‌ ಪಿ. ಮುಂತಾದವರಿಗೆ ಟಿಕೆಟ್‌ ನೀಡಲಾಗಿದೆ.

ಚುನಾವಣಾ ಕಣದಲ್ಲಿ...

* ಭಾನುವಾರ ಸಂಜೆಗೆ ನಿಗದಿಯಾಗಿದ್ದ ಟಿಎಂಸಿಯ ಪ್ರಣಾಳಿಕೆ ಬಿಡುಗಡೆಯು ಮೂರನೇ ಬಾರಿಗೆ ಮುಂದೂಡಿಕೆಯಾಗಿದೆ. ಪ್ರಣಾಳಿಕೆ ಶೀಘ್ರ ಬಿಡುಗಡೆ ಆಗಲಿದೆ ಎಂದು ಪಕ್ಷವು ತಿಳಿಸಿದೆ.

ನುಡಿ ಕಿಡಿ

ನನ್ನ ಮೇಲೆ ಬಹಳ ದಾಳಿಗಳಾಗಿವೆ. ಆದರೆ ನಾನು ಯಾರಿಗೂ ಶರಣಾಗಿಲ್ಲ. ಎಂದೂ ತಲೆ ಬಾಗಿಸುವುದಿಲ್ಲ. ಗಾಯಗೊಂಡ ಹುಲಿ ಹೆಚ್ಚು ಅಪಾಯಕಾರಿ.

-ಮಮತಾ ಬ್ಯಾನರ್ಜಿ, ಟಿಎಂಸಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.