ADVERTISEMENT

ನಡ್ಡಾ ಮೇಲಿನ ದಾಳಿಯಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 'ರಾಜಕೀಯ ಲಾಭ'?

ಸೌಮ್ಯ ದಾಸ್
Published 13 ಡಿಸೆಂಬರ್ 2020, 5:07 IST
Last Updated 13 ಡಿಸೆಂಬರ್ 2020, 5:07 IST
ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ
ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ    

ಕೊಲ್ಕತ್ತಾ: ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ (ಜೆ.ಪಿ.ನಡ್ಡಾ) ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ನಡೆಸಿದ ದಾಳಿಯು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಗಳಿವೆ.

ನಡ್ಡಾ ಮೇಲಿನ ದಾಳಿಯು ಬಂಗಾಳದ ಕಾನೂನು ಸುವ್ಯವಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ರಾಜಕಾರಣದ ಕುರಿತು ಹಲವು ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿವೆ. ವಾಸ್ತವದಲ್ಲಿ ಮಮತಾ ಬ್ಯಾನರ್ಜಿ ಅವರು 'ಉತ್ತಮ ಆಡಳಿತ ಮತ್ತು ಅಭಿವೃದ್ಧಿ'ಯ ಆಧಾರದಲ್ಲಿಯೇ ಚುನಾವಣೆಯ ಕಾರ್ಯತಂತ್ರಗಳನ್ನು ರೂಪಿಸುತ್ತಿರುವ ಹೊತ್ತಿನಲ್ಲಿ ಈ ಘಟನೆ ಪ್ರಾಮುಖ್ಯತೆ ಪಡೆದಿದೆ.

ADVERTISEMENT

ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯನ್ನು ಹಣಿಯಲು ಈ ಘಟನೆಯನ್ನು ದಾಳವಾಗಿ ಬಳಸಿಕೊಂಡಿರುವ ಬಿಜೆಪಿ ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ಒತ್ತಡವನ್ನು ಸೃಷ್ಟಿಸುವ ಕ್ರಮಗಳಿಗೆ ಕೈ ಹಾಕಿದೆ. ಬಂಗಾಳದಲ್ಲಿ ಅರಾಜಕತೆ ಇದೆ ಬಿಂಬಿಸಲು ಬಿಜೆಪಿಗೆ ಈ ಘಟನೆ ದಾಳವಾಗಿದೆ.

ಘಟನೆ ಕುರಿತು 'ಪ್ರಜಾವಾಣಿ'ಯ ಸೋದರ ಪತ್ರಿಕೆ 'ಡೆಕ್ಕನ್‌ ಹೆರಾಲ್ಡ್‌' ಜೊತೆಗೆ ಮಾತನಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, 'ನಡ್ಡಾ ಮತ್ತು ಅವರ ಬೆಂಗಾವಲು ಪಡೆ ಸಾಗುವ ದಾರಿಯ ಅಂಚುಗಳಲ್ಲಿ ಟಿಎಂಸಿ ಉದ್ದೇಶಪೂರ್ವಕವಾಗಿ ಎತ್ತರದ ಜಗುಲಿಗಳನ್ನು ನಿರ್ಮಿಸಿತ್ತು. ಈ ಬಗ್ಗೆ ನಾನು ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದೆ. ಈ ಹಿಂದೆ ಬಿಜೆಪಿ ಅಧ್ಯಕ್ಷರ ಭದ್ರತೆಯಲ್ಲಿ ದೋಷವಾಗಿತ್ತು. ಹಾಗಾಗಿ ಈ ಬಾರಿ ಸಾಕಷ್ಟು ವ್ಯವಸ್ಥೆಗಳ ಅಗತ್ಯವಿದೆ ಎಂದು ಹೇಳಿದ್ದೆ. ಆದರೆ, ಬಂಗಾಳದಲ್ಲಿ ಸಂಪೂರ್ಣ ಅರಾಜಕತೆ ಇದೆ,' ಎಂದು ಅವರು ಆರೋಪಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ಟಿಎಂಸಿ ಸರ್ಕಾರದ ಮೇಲೆ ಆಡಳಿತಾತ್ಮಕ ಒತ್ತಡವನ್ನು ಉಂಟುಮಾಡುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪೋನ್ ಬಂಡೋಪಾಧ್ಯಾಯ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿ) ವೀರೇಂದ್ರ ಅವರನ್ನು ಕರೆಸಿಕೊಳ್ಳುವಂತಹ ಕ್ರಮಗಳೇ ಇದಕ್ಕೆ ಸಾಕ್ಷಿ.

ಕೇಂದ್ರದ ಈ ನಡೆಯಿಂದ ಆಕ್ರೋಶಗೊಂಡಿರುವ ಟಿಎಂಸಿ, 'ಇದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಂಚು,' ಎಂದು ಆರೋಪಿಸಿದೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಗೆ ಪತ್ರ ಬರೆದಿದ್ದು, 'ನೀವು ರಾಜಕೀಯ ದುರುದ್ದೇಶದ ನಡೆಗಳನ್ನು ಅನುಸರಿಸುತ್ತಿದ್ದೀರಿ. ನೀವು ಪರೋಕ್ಷವಾಗಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಪ್ರಯತ್ನಿಸುತ್ತಿದ್ದೀರಿ' ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೇನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಿರುವ ಹೊತ್ತಿನಲ್ಲೇ ನಡ್ಡಾ ಮೇಲೆ ನಡೆದ ದಾಳಿಯ ರಾಜಕೀಯ ಲಾಭ ಪಡೆಯಲು ಬಿಜೆಪಿಯು ತನ್ನ ಉನ್ನತ ಮಟ್ಟದ ನಾಯಕರನ್ನು ಬಂಗಾಳಕ್ಕೆ ನಿಯೋಜಿಸುವ ಮುನ್ಸೂಚನೆಗಳು ದೊರೆತಿವೆ. ಅಮಿತ್‌ ಶಾ ತಮ್ಮ ಭೇಟಿಯ ವೇಳೆ ಈ ವಿಚಾರವನ್ನೇ ಪ್ರಸ್ತಾಪಿಸಿ ಟಿಎಂಸಿ ವಿರುದ್ಧ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಲ್ಯಾಣ ಕಾರ್ಯಗಳು ನಿಷ್ಪಲವಾಗಬಹುದು

'ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಇಂಥ ಘಟನೆಗಳು ಮುಂದುವರಿದಿದ್ದೇ ಆದರೆ, ರಾಜ್ಯ ಸರ್ಕಾರ ಜಾರಿಗೆ ತಂದ ಸಮಾಜ ಕಲ್ಯಾಣ ಯೋಜನೆಗಳು ನಿಷ್ಪಲವಾಗುತ್ತವೆ. ಇಂಥ ಘಟನೆಗಳು ರಾಜಕೀಯ ಮತ ಧ್ರುವೀಕರಣಕ್ಕೆ ಕಾರಣವಾಗುತ್ತವೆ. ಈ ಪ್ರಯತ್ನಗಳು ಲೋಕಸಭೆ ಚುನಾವಣೆಯಿಂದಲೂ ಪಶ್ಚಿಮ ಬಂಗಳಾದಲ್ಲಿ ಚಾಲ್ತಿಯಲ್ಲಿವೆ,' ಎಂದು ರಾಜಕೀಯ ವಿಶ್ಲೇಷಕ ಉದಯನ್ ಬಂಡೋಪಾಧ್ಯಾಯ ಡೆಕ್ಕನ್‌ ಹೆರಾಲ್ಡ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.