ಅಹಮದಾಬಾದ್: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಇತ್ತೀಚೆಗೆ ತಮ್ಮ ಮನೆಗೆ ಊಟಕ್ಕೆ ಕರೆದಿದ್ದ ಇಲ್ಲಿನ ಆಟೋ ಚಾಲಕ ವಿಕ್ರಾಂತ್ ದಂತಾನಿ, 'ನಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ' ಎಂದು ಶುಕ್ರವಾರ ಹೇಳಿಕೊಂಡಿದ್ದಾರೆ.
ಇಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ದಂತಾನಿ, ಕೇಸರಿ ಶಾಲು ಹಾಗೂ ಟೋಪಿ ಧರಿಸಿ ಕಾಣಿಸಿಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ದಂತಾನಿ, ಯುವಕನಾಗಿದ್ದಾಗಿನಿಂದಲೂ ತಾವು ಮೋದಿ ಅವರ ದೊಡ್ಡ ಅಭಿಮಾನಿ.ಮತ ಹಾಕಲು ಕಲಿತಾಗಿನಿಂದಲೂ ಬಿಜೆಪಿ ಬೆಂಬಲಿಸುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಮತ ಹಾಕುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಎಎಪಿ ಜೊತೆ ತಮಗೆ ಯಾವುದೇ ಸಂಬಂಧ ಇಲ್ಲ ಎಂದಿರುವ ಅವರು, ಕೇಜ್ರಿವಾಲ್ ಅವರನ್ನು ಇಷ್ಟಪಡುವುದಾಗಿ ನೀಡಿದ್ದ ಹೇಳಿಕೆಯಿಂದ ಹಿಂದೆಸರಿದಿದ್ದಾರೆ.
ಆಟೋ ರಿಕ್ಷಾ ಒಕ್ಕೂಟ ಹೇಳಿದ್ದರಿಂದ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದೆ. ಅದು ನನ್ನ ಆಯ್ಕೆಯಲ್ಲ ಎಂದೂ ದಂತಾನಿ ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೊ ಇದೀಗ ವೈರಲ್ ಆಗಿದೆ.
ಕೇಜ್ರಿವಾಲ್ ಅವರುಸೆಪ್ಟೆಂಬರ್ 12 ರಂದು ಮುಖ್ಯಮಂತ್ರಿಗಳ ಭದ್ರತಾ ಶಿಷ್ಟಾಚಾರವನ್ನೂ ಉಲ್ಲಂಘಿಸಿ ಆಟೋ ರಿಕ್ಷಾದಲ್ಲಿಯೇ ದಂತಾನಿ ಅವರ ಮನೆಗೆ ತಲುಪಿ, ರಾತ್ರಿ ಊಟ ಮಾಡಿದ್ದರು.
ಆ ವೇಳೆ ಮಾತನಾಡಿದ್ದ ದಂತಾನಿ, ಕೇಜ್ರಿವಾಲ್ ಇಷ್ಟವಾಗುತ್ತಾರೆ. ಹಾಗಾಗಿಯೇ ಅವರನ್ನು ಮನೆಗೆ ಕರೆದಿದ್ದೆ. ಪಂಜಾಬ್‌ನಲ್ಲಿ ಆಟೋ ಚಾಲಕರೊಬ್ಬರು ಅವರನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ್ದ ವಿಡಿಯೊ ನೋಡಿದ್ದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.