ನವದೆಹಲಿ: ನವರಾತ್ರಿಯ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
‘ಈ ಬಾರಿಯ ನವರಾತ್ರಿ ಹೆಚ್ಚು ವಿಶೇಷವಾಗಿದೆ. ಏಕೆಂದರೆ ದೇಶದ ಜನತೆಗೆ ಜಿಎಸ್‌ಟಿ ಉಳಿತಾಯದ ಜತೆಗೆ ಸ್ವದೇಶಿ ಮಂತ್ರವು ಹೊಸ ಶಕ್ತಿಯನ್ನು ನೀಡುತ್ತದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಸಂಕಲ್ಪವನ್ನು ಸಾಧಿಸಲು ನಾವೆಲ್ಲರೂ ಒಂದಾಗೋಣ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಿಎಸ್‌ಟಿ ಸುಧಾರಣಾ ಕ್ರಮಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
ಜಿಎಸ್‌ಟಿ ದರಗಳಲ್ಲಿನ ಪರಿಷ್ಕರಣೆಯು ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸಲಿದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಇದು ದೊಡ್ಡದಾದ ಹಾಗೂ ಮುಖ್ಯವಾದ ಹೆಜ್ಜೆಯಾಗಿದೆ. ಅಲ್ಲದೆ, ಸ್ವದೇಶಿ ಉತ್ಪನ್ನಗಳ ಬಳಕೆಯು ದೇಶದ ಸಮೃದ್ಧಿಗೆ ಇರುವ ಮಾರ್ಗ ಎಂದು ಮೋದಿ ಪ್ರತಿಪಾದಿಸಿದ್ದರು.
ಸ್ವದೇಶಿ ಉತ್ಪನ್ನಗಳ ಬಳಕೆಯು ದೇಶದ ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿದ್ದ ಬಗೆಯಲ್ಲೇ ದೇಶದ ಸಮೃದ್ಧಿಗೂ ಬಲ ತಂದುಕೊಡುತ್ತದೆ. ಪ್ರತಿ ಮನೆಯನ್ನೂ ನಾವು ಸ್ವದೇಶಿಯ ಸಂಕೇತವನ್ನಾಗಿಸಬೇಕು, ಪ್ರತಿ ಅಂಗಡಿಯನ್ನೂ ಸ್ವದೇಶಿ ಉತ್ಪನ್ನಗಳಿಂದ ಅಲಂಕರಿಸಬೇಕು ಎಂದೂ ಅವರು ಕರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.