
ಭೂಪೇನ್ ಬೋರಾ
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಮೈತ್ರಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಬೋರಾ ರಾಜೀನಾಮೆ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಆದಾಗ್ಯೂ, ಪಕ್ಷದ ಹೈಕಮಾಂಡ್, ಬೋರಾ ಅವರನ್ನು ಮನವೊಲಿಸಲು ಮುಂದಾಗಿದೆ ಎಂದು ವರದಿಯಾಗಿದೆ.
2025ರ ಜೂನ್‌ನಲ್ಲಿ ಗೌರವ್ ಗೊಗೊಯಿ ಅವರು ಅಧಿಕಾರ ವಹಿಸಿಕೊಳ್ಳುವವರೆಗೂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಬೋರಾ ಅವರು ಸೋಮವಾರ ಪಕ್ಷದ ಹೈಕಮಾಂಡ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
‘ನಾನು ಇಂದು ಬೆಳಿಗ್ಗೆ 8 ಗಂಟೆಗೆ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ. ಇದು ವೈಯಕ್ತಿಕ ನಿರ್ಧಾರವಲ್ಲ. ರಾಜೀನಾಮೆ ಸಲ್ಲಿಸಲು ಏನು ಕಾರಣ ಎಂಬುದನ್ನು ವಿವರವಾಗಿ ತಿಳಿಸಿದ್ದೇನೆ. 1994ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಾನು ಸುದೀರ್ಘ 32 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಸ್ವಾಭಿಮಾನದ ಪ್ರಶ್ನೆ ಹಾಗೂ ಪಕ್ಷವನ್ನು ಹೇಗೆ ನಡೆಸಲಾಗುತ್ತಿದೆ ಎಂಬುದರ ಕುರಿತಾದ ನನ್ನ ಕಳವಳಗಳನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ’ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ ಇನ್ನು ಬೋರಾ ರಾಜೀನಾಮೆಯನ್ನು ಅಂಗೀಕರಿಸಿಲ್ಲ, ರಾಜೀನಾಮೆ ಹಿಂಪಡೆಯುವಂತೆ ಭೂಪೇನ್ ಬೋರಾ ಅವರನ್ನು ಮನವೊಲಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂನ ಎಐಸಿಸಿ ಉಸ್ತುವಾರಿ, ಹಿರಿಯ ಕಾಂಗ್ರೆಸ್ ನಾಯಕ ಜಿತೇಂದ್ರ ಸಿಂಗ್ ಅವರು ಭೂಪೇನ್ ಬೋರಾ ಮತ್ತು ಗೌರವ್ ಗೊಗೊಯ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದೂ ಮೂಲಗಳು ಉಲ್ಲೇಖಿಸಿವೆ.
2006ರಿಂದ 2016ರವರೆಗೆ ಬಿಹ್ಪುರಿಯಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಬೋರಾ, 2021ರಲ್ಲಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಆ ವರ್ಷ ನಡೆದ ರಾಜ್ಯ ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.