ADVERTISEMENT

Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?

​ಪ್ರಜಾವಾಣಿ ವಾರ್ತೆ
ಅಭಯ್ ಕುಮಾರ್
Published 21 ನವೆಂಬರ್ 2025, 5:48 IST
Last Updated 21 ನವೆಂಬರ್ 2025, 5:48 IST
<div class="paragraphs"><p>ಶ್ರೇಯಸಿ ಸಿಂಗ್ ಹಾಗೂ&nbsp;ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಪ್ರಧಾನಿ ನರೇಂದ್ರ ಮೋದಿ</p></div>

ಶ್ರೇಯಸಿ ಸಿಂಗ್ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಪ್ರಧಾನಿ ನರೇಂದ್ರ ಮೋದಿ

   

ಕೃಪೆ: ಪಿಟಿಐ

ಪಟ್ನಾ: ಬದುಕಿನ ಕೊನೆವರೆಗೂ ತಮನ್ನು ವಿರೋಧಿಸಿದ್ದ ಪ್ರಮುಖ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿ ಶ್ರೇಯಸಿ ಸಿಂಗ್ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಈ ನಡೆ ರಾಜಕೀಯ ವಲಯದಲ್ಲಿ ಭಾರಿ ಅಚ್ಚರಿ ಮೂಡಿಸಿದೆ.

ADVERTISEMENT

ಶ್ರೇಯಸಿ ತಂದೆ ದಿಗ್ವಿಜಯ್‌ ಅವರು ನಿತೀಶ್‌ ಅವರೊಂದಿಗೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು.

ನಿತೀಶ್‌ ಅವರು ಜಾರ್ಜ್‌ ಫರ್ನಾಂಡಿಸ್‌ ಅವರ ಶಿಷ್ಯರಾಗಿದ್ದರೆ, ದಿಗ್ವಿಜಯ್‌ ಅವರು ಮಾಜಿ ಪ್ರಧಾನಿ, ದಿ. ಚಂದ್ರಶೇಖರ್‌ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತವರು. ಅಷ್ಟೇ ಅಲ್ಲ. ದಿ.ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಚಂದ್ರಶೇಖರ್‌ ಅವರ ಸಂಪುಟದಲ್ಲಿ ಸಚಿವರಾಗಿದ್ದವರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದ ನಿತೀಶ್‌ ಮತ್ತು ದಿಗ್ವಿಜಯ್‌ ನಡುವಣ ವೈಮನಸ್ಸಿಗೆ ದೊಡ್ಡ ಇತಿಹಾಸವಿದೆ. ನಿತೀಶ್‌ ಕುಮಾರ್‌ ಅವರು (2001ರ ಮಾರ್ಚ್‌ನಲ್ಲಿ) ರೈಲ್ವೆ ಖಾತೆ ವಹಿಸಿಕೊಂಡಾಗ, ಅದೇ ಇಲಾಖೆಯಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ದಿಗ್ವಿಜಯ್‌ ಅವರನ್ನು ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವರನ್ನಾಗಿ ಬದಲಿಸಲಾಗಿತ್ತು. ಇವರಿಬ್ಬರ ನಡುವಣ ಹಗೆತನ ದಿಗ್ವಿಜಯ್‌ ಅವರು ಕಾಲವಾಗುವವರೆಗೂ ಮುಂದುವರಿದಿತ್ತು.

ಜಾರ್ಜ್‌ ಫರ್ನಾಂಡಿಸ್‌ ಹಾಗೂ ನಿತೀಶ್‌ ಕುಮಾರ್‌ ಅವರು 1994ರಲ್ಲಿ 'ಸಮತಾ ಪಕ್ಷ' ಆರಂಭಿಸಿದಾಗ ದಿಗ್ವಿಜಯ್‌ ಅವರೂ ಜೊತೆಗಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜಾರ್ಜ್‌, ಸಮತಾ ಪಕ್ಷವನ್ನು ಜೆಡಿಯುನಲ್ಲಿ ವಿಲೀನಗೊಳಿಸುವುದಾಗಿ 2003ರಲ್ಲಿ ಘೋಷಿಸಿದರು. ಬಿಹಾರ ಘಟಕದ ಅಧ್ಯಕ್ಷ ಬ್ರಹ್ಮಾನಂದ ಮಂಡಲ್‌ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿ, ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು. ಹೀಗಾಗಿ, ವಿಲೀನ ಪ್ರಕ್ರಿಯೆಯು ತಾಂತ್ರಿಕವಾಗಿ ಪೂರ್ಣಗೊಳ್ಳಲಿಲ್ಲ. ಮಂಡಲ್‌ ಬಣ, ಸಮತಾ ಪಕ್ಷವಾಗಿಯೇ ಮುಂದುವರಿಯಿತು.

1998ರಲ್ಲಿ ಸಮತಾ ಪಕ್ಷದ ಅಭ್ಯರ್ಥಿಯಾಗಿ ಬಂಕಾ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ದಿಗ್ವಿಜಯ್‌, ನಂತರ ಜೆಡಿಯು ಸೇರಿದ್ದರು. 1999ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಜಯ ಸಾಧಿಸಿದ್ದರು. 2004ರಲ್ಲಿ ಆರ್‌ಜೆಡಿ ಅಭ್ಯರ್ಥಿ ಗಿರಿಧರ್‌ ಯಾದವ್‌ ಅವರೆದುರು ಕೇವಲ 2,800 ಮತಗಳ ಅಂತರದಿಂದ ಸೋತಿದ್ದರು. ಆದಾಗ್ಯೂ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಜೆಡಿಯುನಿಂದ ಹೊರನಡೆದಿದ್ದರು.

ತಂದೆಯೊಂದಿಗೆ ಹಗೆತನ; ಮಗಳಿಗೆ ಸಚಿವ ಸ್ಥಾನ
ರಾಜಕೀಯ ಕುಟುಂಬದ ಹಿನ್ನಲೆ ಹೊಂದಿರುವ ಶ್ರೇಯಸಿ ತಮ್ಮ 29ನೇ ವಯಸ್ಸಿನಲ್ಲಿ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಕಾಲಿಟ್ಟವರು. 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಮುಯಿ ಕ್ಷೇತ್ರದಿಂದ ಕಣಕ್ಕಿಳಿದು ಜಯ ಸಾಧಿಸಿದ್ದರು. ತಂದೆ ದಿಗ್ವಿಜಯ್‌ ಅವರ ಭದ್ರಕೋಟೆಯಾಗಿದ್ದ ಬಂಕಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಮುಯಿಯಲ್ಲಿ 2025ರ ಚುನಾವಣೆಯಲ್ಲೂ ಗೆದ್ದಿದ್ದಾರೆ.

ನಿತೀಶ್‌ ಜೊತೆಗಿನ ಸಂಬಂಧ ಹಳಸಿದ ಕಾರಣ, ದಿಗ್ವಿಜಯ್‌ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ಜಯ ಸಾಧಿಸಿದ್ದರು. 2010ರಲ್ಲಿ ದಿಗ್ವಿಜಯ್‌ ನಿಧನದ ಬಳಿಕ ಅವರ ಪತ್ನಿ ಪುತುಲ್‌ ಕುಮಾರಿ ಅವರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಬಿಜೆಪಿ ಸೇರಿದ್ದರು.

ತಮ್ಮ ತಂದೆಯವರು ಸಮತಾ ಪಕ್ಷದಲ್ಲಿದ್ದ ದಿನಗಳಿಂದಲೂ ನಿತೀಶ್‌ ಅವರಿಂದ ಅಪಮಾನಕ್ಕೊಳಗಾಗಿದ್ದರು ಎಂಬುದನ್ನು ಗಮನದಲ್ಲಿಟ್ಟುಕೊಂಡಿರುವ ಶ್ರೇಯಸಿ ಕೂಡ, ತಾಯಿಯನ್ನು ಅನುಕರಿಸಿದ್ದಾರೆ. ಜೆಡಿಯು ಸೇರಲು ನಿರಾಕರಿಸಿ, 2020ರಲ್ಲಿ ಬಿಜೆಪಿ ಸೇರಿರುವ ಅವರು ನಕ್ಸಲ್‌ಪೀಡಿತ ಜಮುಯಿಯಲ್ಲಿ ಕಮಲ ಅರಳಿಸಿದ್ದಾರೆ.

ಅದನ್ನೆಲ್ಲ ಮರೆತಿರುವ ಅಥವಾ ಮರೆತಂತೆ ಕಾಣುತ್ತಿರುವ ನಿತೀಶ್‌, ತಾವು ಹಗೆತನ ಸಾಧಿಸಿದ್ದ ದಿಗ್ವಿಜಯ್‌ ಪುತ್ರಿಯನ್ನು ಸಂಪುಟಕ್ಕೆ ಸೇರಿಕೊಂಡಿದ್ದಾರೆ.

ಡಿಪಿಎಸ್‌ ವಿದ್ಯಾರ್ಥಿಗಳೀಗ, ವಿಧಾನಸಭೆಯಲ್ಲಿ ಎದುರಾಳಿಗಳು
ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಪುಟದ ಅತ್ಯಂತ ಕಿರಿಯ ಸಚಿವೆ ಎನಿಸಿರುವ ಶ್ರೇಯಸಿ ಮತ್ತು ವಿರೋಧ ಪಕ್ಷ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ವಿಧಾನಸಭೆಯಲ್ಲಿ ಮುಖಾಮುಖಿಯಾಗುವ ಅಪರೂಪದ ಸಂದರ್ಭ ಶೀಘ್ರದಲ್ಲೇ ಒದಗಿಬರಲಿದೆ. ಈ ಇಬ್ಬರೂ, ನವದೆಹಲಿಯ ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಎರಡು ದಶಕಗಳ ಹಿಂದೆ ವಿದ್ಯಾರ್ಥಿಗಳಾಗಿದ್ದರು.

ತೇಜಸ್ವಿ ಅವರು 10ನೇ ತರಗತಿಯನ್ನೇ ಪೂರ್ಣಗೊಳಿಸಿಲ್ಲ. ಆದರೆ, ಎಂಬಿಎ ಓದಿಕೊಂಡಿರುವ ಶ್ರೇಯಸಿ, 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು, ಅರ್ಜುನ ಪ್ರಶಸ್ತಿ ಪುರಸ್ಕೃತರೂ ಹೌದು.

1991ರ ಆಗಸ್ಟ್‌ನಲ್ಲಿ ಜನಿಸಿದ ಶ್ರೇಯಸಿ, ಸಚಿವೆಯಾಗಿ ನಿತೀಶ್‌ ಸಂಪುಟಕ್ಕೆ ನವೆಂಬರ್‌ 20ರಂದು (ಬುಧವಾರ) ಸೇರುವ ಮೂಲಕ ಮತ್ತೊಮ್ಮೆ 'ಪದಕ'ದ ಸಂಭ್ರಮ ಆಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.