ADVERTISEMENT

ಬಿಹಾರ ಚುನಾವಣೆ: ತೇಜಸ್ವಿ ಮನೆಯಲ್ಲಿ ಇಂಡಿಯಾ ಸಭೆ; ಶೀಘ್ರವೇ ಸೀಟು ಹಂಚಿಕೆ ‍ಪ್ರಕಟ

ಪಿಟಿಐ
Published 6 ಅಕ್ಟೋಬರ್ 2025, 6:55 IST
Last Updated 6 ಅಕ್ಟೋಬರ್ 2025, 6:55 IST
<div class="paragraphs"><p>ಇಂಡಿಯಾ ಮೈತ್ರಿಕೂಟದ ನಾಯಕರು (ಸಂಗ್ರಹ ಚಿತ್ರ)</p></div>

ಇಂಡಿಯಾ ಮೈತ್ರಿಕೂಟದ ನಾಯಕರು (ಸಂಗ್ರಹ ಚಿತ್ರ)

   

ಕೃಪೆ: ಪಿಟಿಐ

ಪಟ್ನಾ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಸನ್ನಿಹಿತವಾಗುತ್ತಿದ್ದಂತೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಭಾನುವಾರ ಸಭೆ ಸೇರಿದ್ದ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ನಾಯಕರು, ಸೀಟು ಹಂಚಿಕೆ ಸೂತ್ರವನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಬಹುಪಕ್ಷಗಳ ನಾಯಕರ ಸಭೆಯು, ಮುಂಬರುವ ಚುನಾವಣೆಗೆ 'ಇಂಡಿಯಾ' ಬಣದ ಸಹಕಾರ ಸಮಿತಿಯ ಮುಖ್ಯಸ್ಥರಾಗಿರುವ, ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸದಲ್ಲಿ ರಾತ್ರಿವರೆಗೂ ನಡೆದಿದೆ.

ಸಭೆ ನಂತರ ಮಾತನಾಡಿರುವ 'ವಿಕಾಸಶೀಲ್‌ ಇನ್ಸಾನ್‌' ಪಕ್ಷದ ಅಧ್ಯಕ್ಷ ಮುಕೇಶ್‌ ಸಾಹ್ನಿ, 'ಎಲ್ಲ ವಿಚಾರಗಳನ್ನೂ ಅಂತಿಮಗೊಳಿಸಲಾಗಿದೆ. ಆದರೆ, ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕ್ಷಮಿಸಿ. ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಪ್ರಕಟಿಸುತ್ತೇವೆ' ಎಂದು ತಿಳಿಸಿದ್ದಾರೆ.

2020ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಸೋಲು ಕಂಡಿದ್ದ ಸಾಹ್ನಿ, ಬಿಜೆಪಿ ನೇತೃತ್ವದ ಬಿಹಾರ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ ಜೊತೆಗಿನ ಮೈತ್ರಿ ಮುರಿದುಕೊಂಡು, ಕಾಂಗ್ರೆಸ್‌ ಒಳಗೊಂಡಂತೆ ಎಡಪಕ್ಷಗಳಿರುವ 'ಇಂಡಿಯಾ' ಬಣದೊಂದಿಗೆ ಕೈಜೋಡಿಸಿದ್ದಾರೆ.

ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲೋಕ್ ಮೆಹ್ತಾ ಅವರು ಸಭೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಎಚ್ಚರಿಕೆಯಿಂದ ಉತ್ತರಿಸಿದ್ದಾರೆ.

'ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದೆ. ಕೆಲವು ಇನ್ನಷ್ಟೇ ಇತ್ಯರ್ಥವಾಗಬೇಕಿದೆ. ಆದರೆ, ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ' ಎಂದಿದ್ದಾರೆ.

ಸಭೆಗೂ ಮುನ್ನ ಮಾತನಾಡಿದ್ದ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಾಜೇಶ್‌ ಕುಮಾರ್‌ ಹಾಗೂ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲವಾರು ಅವರು, ಸಭೆ ವೇಳೆ 'ಸೀಟು ಹಂಚಿಕೆ' ಹಾಗೂ 'ಅಭ್ಯರ್ಥಿ ಆಯ್ಕೆ' ಪ್ರಮುಖವಾಗಿ ಚರ್ಚೆಯಾಗಲಿವೆ ಎಂದಿದ್ದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ನೇತೃತ್ವದ ತಂಡ, ಬಿಹಾರದಲ್ಲಿ ಚುನಾವಣೆ ಸಿದ್ಧತೆ ಪರಿಶೀಲನೆ ಸಲುವಾಗಿ ಕೈಗೊಂಡಿದ್ದ ಎರಡು ದಿನಗಳ ಭೇಟಿ ಭಾನುವಾರ ಮುಕ್ತಾಯವಾಗಿದೆ. ಬಳಿಕ ಪತ್ರಿಕಾಗೋಷ್ಟಿ ನಡೆಸಿದ್ದ ಅವರು, ಪ್ರಸ್ತುತ ಸರ್ಕಾರದ ಅವಧಿ ಮುಕ್ತಾಯವಾಗುವ ವೇಳೆಗೆ (ನವೆಂಬರ್‌ 22ರೊಳಗೆ) ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಇಂದು ಸಂಜೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.